ಸಿ.ಎಂ ಸಿದ್ದರಾಮಯ್ಯರಿಂದ ಜಗಳ ಹಚ್ಚುವ ಕೆಲಸ: ಮುರಳೀಧರ್ ರಾವ್ ಆರೋಪ
ಬೆಂಗಳೂರು, ಎ. 29: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿ ಭಾಷಿಕರು ಮತ್ತು ಕನ್ನಡಿಗರ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ನಗರದಲ್ಲಿ ಬಿಜೆಪಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರೊಂದಿಗೆ ತಮಿಳು, ತೆಲುಗು ಭಾಷಿಕರು ಹೆಚ್ಚಿದ್ದಾರೆ. ಅದೇ ರೀತಿ ಹಿಂದಿ ಭಾಷಿಕರು ಮತ್ತು ಪೂರ್ವಾಂಚಲ ರಾಜ್ಯದ ಜನರು ಇದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿ ಭಾಷಿಕರು ಹಾಗೂ ಕನ್ನಡಿಗರ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿರುವ ಹಿಂದಿ ಭಾಷಿಕರು ಯಾವುದೇ ಗಲಾಟೆ ಮಾಡಿಕೊಂಡಿಲ್ಲ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದರು.
ಸಿದ್ದರಾಮಯ್ಯನವರಿಗೆ ಪರಸ್ಪರ ಜಗಳ ಹಚ್ಚದಿದ್ದರೆ ನಿದ್ದೆ ಬರುವುದಿಲ್ಲ. ಈಗಾಗಲೇ ಅವರು ಹಿಂದೂ, ಮುಸ್ಲಿಮರ ಜೊತೆ ಜಗಳ ತಂದಿಟ್ಟಿದ್ದಾರೆ. ಟಿಪ್ಪು ಸುಲ್ತಾನ್ ಜಪ ಮಾಡಿ ರಾಜ್ಯದ ಶಾಂತಿ ಕದಡಿದ್ದಾರೆ. ಒಡಕು ಮೂಡಿಸುವ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕೈಗೆತ್ತಿಕೊಂಡಿದ್ದಾರೆಂದು ಟೀಕಿಸಿದರು.
ನಾನು ಒಮ್ಮೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದೆ. ಆಗ ಸಿದ್ದರಾಮಯ್ಯ ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದರು. ರಾಷ್ಟ್ರೀಯ ಪಕ್ಷದ ನಾಯಕರಾಗಿ ಹೇಗೆ ಈ ರೀತಿ ಹೇಳಿದ್ದಾರೆ? ಕರ್ನಾಟಕದ ಮುಖ್ಯಮಂತ್ರಿಗೆ ಹಿಂದಿಯಲ್ಲಿ ಮಾತನಾಡಲು, ಬರೆಯಲು ಕಷ್ಟವಾಗುತ್ತೆ. ಆದರೆ, ಇಂಗ್ಲಿಷ್‌ನಲ್ಲಿ ಮಾತನಾಡಲು ಬರೆಯಲು ಬರುತ್ತೆ ಎಂದರು.