ಕಳಂಕ ತರುವ ವೈದ್ಯರಿಗೆ ಕಠಿಣ ಶಿಕ್ಷೆಯಾಗಬೇಕು: ನ್ಯಾ.ಸಂತೋಷ್ ಹೆಗ್ಡೆ

Update: 2018-04-29 15:03 GMT

ಬೆಂಗಳೂರು, ಎ. 29: ವೈದ್ಯಕೀಯ ವೃತ್ತಿಗೆ ಕಳಂಕ ತರುವಂತಹ ವೈದ್ಯರನ್ನು ಗುರುತಿಸಿ ಭಾರತೀಯ ಮೆಡಿಕಲ್ ಕೌನ್ಸಿಲ್ ಕಠಿಣ ಶಿಕ್ಷೆ ವಿಧಿಸಿದರೆ, ಉಳಿದವರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಹಾಗೂ ಕಳಂಕ ರಹಿತ ವೈದ್ಯಕೀಯ ಸೇವೆ ನೀಡಲು ಸಾಧ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಲ್ಟಿಯಸ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಗೈನಕಾಲಜಿ, ಎಂಡೋಸ್ಕೋಪಿ ಮತ್ತು ಯುರೋಗೈನಕಾಲಜಿಯಲ್ಲಿ ಇತ್ತೀಚಿನ ಆವಿಷ್ಕಾರಗಳು ವಿಷಯ ಕುರಿತ ‘ರೇಜಸ್’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉಳ್ಳವರು ಹಾಗೂ ಬಡವರು ಎಂಬ ತಾರತಮ್ಯ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಣವುಳ್ಳವರಿಗೆ ಉತ್ತಮವಾದ ಆರೋಗ್ಯ ಸೇವೆ ಸಿಗುತ್ತಿದ್ದರೆ, ಬಡವರು ಅನಾರೋಗ್ಯದಿಂದ ಮುಕ್ತಿ ಹೊಂದಲು ಪರದಾಡುವಂತಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ಬಡವ- ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಸಮಾನವಾದ ಸೇವೆ ಸಲ್ಲಿಸಬೇಕು. ಒಂದು ವೇಳೆ ವೈದ್ಯಕೀಯ ಕ್ಷೇತ್ರಕ್ಕೆ ಅವಮಾನ ಮಾಡುವಂತಹ ಕೆಲಸ ಮಾಡುವ ವೈದ್ಯರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದರು.

ತೃಪ್ತಿ ಇಲ್ಲದಿದ್ದರೆ ದುರಾಸೆ ಹೆಚ್ಚಾಗುತ್ತದೆ. ಅದನ್ನು ನಿವಾರಣೆ ಮಾಡಿಕೊಳ್ಳಲು ಯಾವುದೇ ಔಷಧವಿಲ್ಲ. ಹೀಗಾಗಿ, ಜನರಿಗೆ ಬರುವ ರೋಗಗಳಿಗೆ ವೈದ್ಯೆ ಮಾಡುವ ವೈದ್ಯರು ಜೀವನದಲ್ಲಿ ಅತಿಯಾಸೆಗೆ ಪಡದೆ, ಎಲ್ಲರಿಗೂ ಸೇವೆ ಸಲ್ಲಿಸಬೇಕು ಹಾಗೂ ವೈದ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಹುಟ್ಟುವಾಗ ಮಾನವನಾಗಿ ಜನಿಸಿ ಮಾನವೀಯತೆಯ ಮೂಲಕ ಬದುಕಿ ಸಾಯುವಾಗ ಮಾನವನಾದರೆ ಆಗ ಜನ್ಮಕ್ಕೆ ಗೌರವ ಸಿಗುತ್ತದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಭ್ರಷ್ಟರಿಗೆ ವ್ಯಾಪಕ ಬೆಂಬಲ ನೀಡಲಾಗುತ್ತಿದೆ. ಬೋಪಾಲ್ ಹಗರಣ, ಕೋಲ್ಗೇಟ್ ಹಗರಣ, 2 ಜಿ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದು ಹೋಗಿವೆ. ಕೋಟಿ ಕೋಟಿ ರೂ.ಗಳನ್ನು ಕೊಳ್ಳೆ ಹೊಡೆಯಲಾಗಿದೆ. ಆದರೂ, ಜನರು ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸನ್ಮಾನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ದುರಾಸೆ ತುಂಬಿಕೊಂಡಿರುವ ಸಮಾಜವನ್ನು ಬದಲಾಯಿಸಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಐಎಂಎ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ವೈದ್ಯರು ಮತ್ತು ರೋಗಿಗಳ ನಡುವೆ ಆತ್ಮೀಯವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಯಾವುದೇ ತಾರತಮ್ಯವಿಲ್ಲದೆ ಸಮಾನವಾದ ಸೇವೆ ನೀಡಬೇಕು. ನಮ್ಮಲ್ಲಿರುವ ಅಹಂನಿಂದ ಹೊರಬಂದು ಸ್ವ ಅನುಕಂಪವನ್ನು ಬೆಳೆಸಿಕೊಂಡು ಸೇವೆ ಸಲ್ಲಿಸಿದಾಗ ಮಾತ್ರ ಉತ್ತಮ ವೈದ್ಯರಾಗುತ್ತೇವೆ ಎಂದು ಹೇಳಿದರು.

ಮುನ್ನಾಭಾಯ್ ಸಿನೆಮಾದಲ್ಲಿರುವ ನಟನಲ್ಲಿರುವ ಗುಣಗಳನ್ನು ಹಾಗೂ ಅವನ ಸ್ವಭಾವವನ್ನು ಪ್ರತಿಯೊಬ್ಬ ವೈದ್ಯರೂ ಅಳವಡಿಸಿಕೊಳ್ಳಬೇಕು. ಆ ಸಿನೆಮಾದಲ್ಲಿ ನಟ ವೈದ್ಯನಾಗಿ ಮಾಡುವ ಸೇವೆಯನ್ನು ಎಲ್ಲರೂ ತಮಾಷೆಯಾಗಿ ನೋಡುತ್ತಾರೆ. ಆದರೆ, ಅವರ ಮನೋಭಾವ ಗುಣ ಎಲ್ಲರಿಗೂ ಮಾದರಿಯಾಗಿದೆ. ಅದನ್ನು ಅಳವಡಿಸಿಕೊಂಡರೆ ಯಾವುದೇ ಭೇದ-ಭಾವವಿಲ್ಲದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಹಾಗೂ ನಮ್ಮ ವೃತ್ತಿಗೆ ನ್ಯಾಯ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಪುನಿತ್‌ರಂಗಾರಾವ್, ಡಾ.ಪ್ರಶಾಂತ್ ಮಂಜೇಶ್ವರ್, ಡಾ.ಬಿ.ರಮೇಶ್ ಹಾಗೂ ವೈದ್ಯ ಡಾ. ಅಂತೋನಿಯೋ ಸೇಟುಬಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News