'ಆ ಕ್ಷಣ ಎಲ್ಲವೂ ಮುಗಿದು ಹೋಯಿತು ಎಂದುಕೊಂಡೆ' ಎಂದ ರಾಹುಲ್

Update: 2018-04-30 07:09 GMT

ಹೊಸದಿಲ್ಲಿ, ಎ. 30: ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಕೂಡಲೇ ತಾನು ರಾಜಕೀಯದಿಂದ 10 ದಿನಗಳ ವಿರಾಮ ತೆಗೆದುಕೊಂಡು ಕೈಲಾಸ ಮಾನಸಸರೋವರ ತೀರ್ಥಯಾತ್ರೆಗೈಯ್ಯುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರವಿವಾರ ಘೋಷಿಸಿದ್ದಾರೆ.

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಜನ ಆಕ್ರೋಶ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ತಾವು ದಿಲ್ಲಿಯಿಂದ ಕರ್ನಾಟಕಕ್ಕೆ ತೆರಳುತ್ತಿದ್ದ ಚಾರ್ಟರ್ಡ್ ವಿಮಾನವೊಂದು ಹುಬ್ಬಳ್ಳಿಯಲ್ಲಿ ಭೂಸ್ಪರ್ಶ ಮಾಡುವಂತಹ ಸಂದರ್ಭ ವಿಮಾನದಲ್ಲಿ ತಲೆದೋರಿದ ತಾಂತ್ರಿಕ ದೋಷದ ಬಗ್ಗೆ ಮಾತನಾಡಿದರು.

‘‘ಎರಡು ಮೂರು ದಿನಗಳ ಹಿಂದೆ ನಾನು ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಒಮ್ಮೆಗೇ 8,000 ಅಡಿ ಕೆಳಕ್ಕಿಳಿದಿತ್ತು. ಎಲ್ಲವೂ ಮುಗಿದು ಹೋಯಿತು ಎಂದು ನಾನಂದುಕೊಂಡೆ. ಆ ರೀತಿ ಯೋಚಿಸಿದಾಕ್ಷಣ ನನಗೆ ಕೈಲಾಸ ಮಾನಸಸರೋವರಕ್ಕೆ ಹೋಗಬೇಕೆನಿಸಿತು,’’ ಎಂದು ನೆರೆದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಕರತಾಡನದ ನಡುವೆ ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ ಮತ್ತೊಮ್ಮೆ ಈ ವಿಚಾರ ಎತ್ತಿದ ರಾಹುಲ್ ‘‘ಕರ್ನಾಟಕ ಚುನಾವಣೆಯ ನಂತರ ಕೈಲಾಸ ಮಾನಸಸರೋವರ ಯಾತ್ರೆಗೆ ಹೋಗಲು ನಿಮ್ಮಿಂದ ನನಗೆ 10-15 ದಿನ ರಜೆ ಬೇಕಾಗಿದೆ’’ ಎಂದು ಹೇಳಿ ಕಾರ್ಯಕರ್ತರ ‘ಅನುಮತಿ’ ಕೋರಿದರು.

ಕೈಲಾಸ ಮಾನಸ ಸರೋವರ ಯಾತ್ರೆ ಜಗತ್ತಿನ ಅತ್ಯಂತ ಕಠಿಣ ತೀರ್ಥಯಾತ್ರೆಗಳಲ್ಲೊಂದಾಗಿದ್ದು, ಪ್ರತಿ ವರ್ಷ ನೂರಾರು ತೀರ್ಥಯಾತ್ರಿಗಳನ್ನು ಆಕರ್ಷಿಸುತ್ತಿದೆ. ರಾಹಲ್ ವಿಮಾನದಲ್ಲುಂಟಾದ ತಾಂತ್ರಿಕ ವೈಫಲ್ಯದ ಬಗೆಗೆ ಕಾಂಗ್ರೆಸ್ ಈ ಹಿಂದೆ ಪ್ರತಿಕ್ರಿಯಿಸಿ ಇದೊಂದು ಉದ್ದೇಶಪೂರ್ವಕ ಕೃತ್ಯವೆಂದು ಹೇಳಿ ತನಿಖೆಗೆ ಕೋರಿತ್ತು. ರಾಹುಲ್ ಅವರು 10 ಆಸನಗಳ ಫಾಲ್ಕನ್ 2000 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನಯಾನ ನಿರ್ದೇಶನಾಲಯ ಈಗಾಗಲೇ ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಿದೆ.

ರಾಹುಲ್ ಅವರು ಜನವರಿ 2013ರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದಂದಿನಿಂದ ಸಕ್ರಿಯ ರಾಜಕಾರಣದಿಂದ ಆಗಾಗ ಹಲವು ದಿನಗಳ ಕಾಲ ದೂರವಿದ್ದು ಇತರ ಪಕ್ಷಗಳು, ಮುಖ್ಯವಾಗಿ ಬಿಜೆಪಿಯಿಂದ ಟೀಕೆಗೊಳಗಾಗಿದ್ದರು.

ಈ ವರ್ಷದ ಮಾರ್ಚ್ ತಿಂಗಳಲ್ಲಿ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ಚುನಾವಣಾ ಫಲಿತಾಂಶದ ಸಂದರ್ಭ ಅವರು ಇಟಲಿಯಲ್ಲಿ ತಮ್ಮ ಅಜ್ಜಿಯ ಜತೆ ಹೋಳಿ ಆಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News