ಬಂದೂಕು ತೋರಿಸಿ ದರೋಡೆ: ಐವರ ಬಂಧನ

Update: 2018-05-02 15:29 GMT

ಬೆಂಗಳೂರು, ಮೇ.2: ಪಾದಚಾರಿಗಳನ್ನು ಗುರಿಯಾಗಿಸಿಕೊಂಡು ನಾಡ ಬಂದೂಕು ತೋರಿಸಿ ದರೋಡೆ ಮಾಡುತ್ತಿದ್ದ ಆರೋಪದ ಮೇಲೆ ಐದು ಜನರನ್ನು ಇಲ್ಲಿನ ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಮಾರತ್‌ಹಳ್ಳಿ ನಿವಾಸಿ ಸೈಯದ್ ಅಬ್ರಾರ್(29), ಕೆ.ಜಿ.ಹಳ್ಳಿ ನಸ್ರುಲ್ಲಾ(24), ತೌಸೀಫ್ ಅಹ್ಮದ್(28), ತಬ್ರೇಝ್(28), ಉತ್ತರ ಪ್ರದೇಶದ ಮಿರಾಜ್ ಖಾನ್(29) ಬಂಧಿತ ಆರೋಪಿಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಪಾದಚಾರಿಗಳು ಹಾಗೂ ಸಿಗರೇಟ್ ವ್ಯಾಪಾರಿಗಳು, ಪಿಗ್ಮಿ ಹಣ ಸಂಗ್ರಹಿಸುವವರನ್ನು ಗುರುತಿಸಿ, ಯಾರೂ ಇಲ್ಲದ ಪ್ರದೇಶದಲ್ಲಿ ಹೋಗುತ್ತಿರುವಾಗ ಆರೋಪಿಗಳು ಎರಡು ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗುತ್ತಿದ್ದರು.

ಸಿಗರೇಟ್ ವ್ಯಾಪಾರಿಗಳ ಬಳಿ ನಗದು ಇರುವುದನ್ನು ಗಮನಿಸುತ್ತಿದ್ದ ಆರೋಪಿಗಳು, ಅವರನ್ನೇ ಗುರಿಯಾಗಿಸುತ್ತಿದ್ದರು. ಗಾರ್ವೆ ಬಾವಿಪಾಳ್ಯದ ಮಧುಸೂದನ್ ಎಂಬುವರು ಸಿಗರೇಟ್ ಮಾರಾಟ ಮಾಡಿ ಹೊಂಗಸಂದ್ರ ರಸ್ತೆಯಲ್ಲಿ ಹೋಗುತ್ತಿದ್ದಾಗ, ಆರೋಪಿಗಳು ಅವರ ಹಣದ ಬ್ಯಾಗ್‌ನ್ನು ಕಿತ್ತುಕೊಂಡಿದ್ದರು. ಬ್ಯಾಗ್ ನೀಡದಿದ್ದಾಗ ಮಧುಸೂದನ್‌ಗೆ ಚೂರಿಯಿಂದ ಗಾಯಗೊಳಿಸಿ ಹಲ್ಲೆ ನಡೆಸಿ, ಬ್ಯಾಗ್ ಕಸಿದು ಪರಾರಿಯಾಗಿದ್ದರು. 50 ಸಾವಿರ ರೂ. ಕಳೆದುಕೊಂಡ ಬಗ್ಗೆ ಮಧುಸೂದನ್ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಬೇಗೂರು-ಕೊಪ್ಪ ರಸ್ತೆಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್ ಬಳಿ ಎ.13ರಂದು ರಾತ್ರಿ 7ರಲ್ಲಿ ನಾಲ್ವರು ಅಪರಿಚಿತರು ದರೋಡೆಗೆ ಹೊಂಚು ಹಾಕುತ್ತಿದ್ದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು. ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಾಗ, ಸಿಸಿಕ್ಯಾಮಾರಾದಲ್ಲಿ ಪತ್ತೆಯಾದ ಆರೋಪಿಗಳಿಗೂ ಇವರಿಗೂ ಸಾಕಷ್ಟು ಹೋಲಿಕೆ ಕಂಡು ಬಂದಿತ್ತು. ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 2 ನಾಡ ಪಿಸ್ತೂಲು, 4 ಜೀವಂತ ಗುಂಡುಗಳು, 2 ಡ್ರಾಗರ್, 2 ಬೈಕ್, 80 ಸಾವಿರ ರೂ. ಅನ್ನು ವಶಕ್ಕೆ ಪಡೆದು, ಬೇಗೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News