ಅಭಿವೃದ್ಧಿ ಬಗ್ಗೆ ದೂರದೃಷ್ಟಿ-ದಿಕ್ಕು ದೆಸೆಯಿಲ್ಲದ ಬಿಜೆಪಿ: ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ

Update: 2018-05-02 15:37 GMT

ಬೆಂಗಳೂರು, ಮೇ 2: ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಬಿಜೆಪಿ ಬತ್ತಳಿಕೆ ಬರಿದಾಗಿದ್ದು, ಅದರ ಬಳಿ ಯಾವ ವಿಚಾರವಾಗಲಿ, ಆ ಪಕ್ಷಕ್ಕೆ ದೂರದೃಷ್ಟಿಯಾಗಲಿ, ದಿಕ್ಕು ದೆಸೆಯಾಗಲಿ ಇಲ್ಲ ಎನ್ನುವುದು ರಾಜ್ಯದ ಮತದಾರರಿಗೆ ಚೆನ್ನಾಗಿ ಗೊತ್ತಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ ಹೇಳಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ದ್ರೋಹ ಬಗೆದು, ಬೆನ್ನಿಗೆ ಚೂರಿ ಹಾಕಿರುವ ಪ್ರಧಾನಿ ನರೇಂದ್ರಮೋದಿ, ಇಲ್ಲಿ ಚುನಾವಣಾ ಪ್ರಚಾರ ಮಾಡುವ ಬದಲು ಎಲ್ಲರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಕಡುಭ್ರಷ್ಟರಾದ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರನ್ನು ಕಟ್ಟಿಕೊಂಡು ಬಿಜೆಪಿ ಎಂಬ ಮುಳುಗುತ್ತಿರುವ ಹಡಗನ್ನು ರಕ್ಷಿಸಲು ನರೇಂದ್ರಮೋದಿ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಅವರು ರಾಜ್ಯದ ಜನತೆಗೆ ಎಂತಹ ಸುಳ್ಳುಗಳನ್ನಾದರೂ ಹೇಳಬಲ್ಲರು. ಆದರೆ, ಮೋದಿಯವರು ತಮ್ಮ ಮೂಗಿನಡಿಯಲ್ಲೆ ನಡೆದಿರುವ ಹಗರಣಗಳಿಗೆ ಸರಿಯಾದ ಉತ್ತರವನ್ನು ಕೊಡಬೇಕೆನ್ನುವುದು ನಮ್ಮ ಆಗ್ರಹವಾಗಿದೆ ಎಂದು ಅವರು ಹೇಳಿದರು.

ನರೇಂದ್ರಮೋದಿ ಬಳಸುವ ಭಾಷೆ ಸರಿಯಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಅವಹೇಳನ ಮಾಡುತ್ತಾರೆ. ಪ್ರಧಾನಿ ಹುದ್ದೆಯಲ್ಲಿರುವವರು ನಡೆದುಕೊಳ್ಳುವ ರೀತಿ ಇದಲ್ಲ. ಪ್ರಧಾನಿ ಹಾಗೂ ಬಿಜೆಪಿಯವರಿಗೆ ಸುಳ್ಳೇ ವೇದವಾಕ್ಯವಾಗಿದೆ ಎಂದು ಆನಂದ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ವಸತಿ ಹೀನರ ಸಮಸ್ಯೆ ಹೆಚ್ಚಿದೆ. ಶೇ.25ರಷ್ಟು ಜನರಿಗೆ ವಸತಿ ಸೌಲಭ್ಯವಿಲ್ಲದಿರುವುದು ಆರ್ಥಿಕ ಸಮೀಕ್ಷೆಯಿಂದ ಬಹಿರಂಗವಾಗಿದೆ. ಇದರ ಬಗ್ಗೆ ಯಾಕೆ ನರೇಂದ್ರಮೋದಿ ಮಾತನಾಡುವುದಿಲ್ಲ. ಕೇವಲ ಸುಳ್ಳು ಹೇಳಿಕೊಂಡು ಕಾಲ ಕಳೆಯಬೇಡಿ ಎಂದು ಅವರು ಹೇಳಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಅದರ ಕಥೆ ಏನಾಯಿತು? ನವೋದ್ಯಮಗಳ ಬೆಳವಣಿಗೆ ಎಷ್ಟರ ಮಟ್ಟಿಗೆ ಆಗಿದೆ. ನಿಮ್ಮ ಆಡಳಿತದಿಂದ ಸಮಾಜವು ಕಂಗಾಲಾಗಿದೆ, ಮಹಿಳೆಯರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ನರೇಂದ್ರಮೋದಿ ಹೊಗಳಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಆನಂದ್ ಶರ್ಮಾ, ಚುನಾವಣೆ ಸಂದರ್ಭದಲ್ಲಿ ದೇವೇಗೌಡರು ನಿಮಗೆ ನೆನಪಾಗಿದ್ದಾರೆ. ದೇವೇಗೌಡರ ಬಗ್ಗೆ ರಾಹುಲ್‌ಗಾಂಧಿ ಗೌರವವಿಟ್ಟುಕೊಂಡಿದ್ದಾರೆ. ಈ ಹಿಂದೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸಬೇಕೆಂದು ಹೇಳಿದ್ದೀರಿ. ದೇವೇಗೌಡರು ವಿಶ್ವಮಾನ್ಯ ಗಣ್ಯರು, ಮೊದಲು ನೀವು ಅವರ ಕ್ಷಮೆಯಾಚಿಸಬೇಕು ಎಂದರು.

ರೆಡ್ಡಿ ಸಹೋದರರ ಬಗ್ಗೆ ಬಿಜೆಪಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿರುವುದೇಕೆ? ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಅವರ ಬಗ್ಗೆ ಬಿಜೆಪಿ ಹಾಗೂ ಯಡಿಯೂರಪ್ಪ ಭಿನ್ನ ನಿಲುವು ಹೊಂದಿರುವುದು ಏಕೆ ಎಂದು ಆನಂದ್ ಶರ್ಮಾ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ವಿಭಾಗದ ಸಂಚಾಲಕಿ ಪ್ರಿಯಾಂಕಾ ಚುತುರ್ವೇದಿ, ಕೆಪಿಸಿಸಿ ವಕ್ತಾರ ಎಂ.ಸಿ.ನಾಣಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News