ದಲಿತರನ್ನು ಪವಿತ್ರಗೊಳಿಸಲು ನಾನು ಶ್ರೀರಾಮ ಅಲ್ಲ: ಉಮಾ ಭಾರತಿ

Update: 2018-05-02 16:29 GMT

ಚತ್ತಾರ್‌ಪರ, ಮೇ 2: ದಲಿತರನ್ನು ಪವಿತ್ರಗೊಳಿಸಲು ತಾನು ಶ್ರೀರಾಮನಲ್ಲ ಎಂದು ಕೇಂದ್ರ ಸಚಿವ ಉಮಾ ಭಾರತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಲಿತರೊಂದಿಗಿನ ಪಕ್ಷ ಉತ್ತಮ ಸಂಬಂಧ ಹೊಂದಿದೆ ಎಂಬುದಕ್ಕೆ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿರುವುದೇ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ಗಂಟೆಯ ಬಳಿಕ ಉಮಾ ಭಾರತಿ ಅವರ ಈ ಹೇಳಿಕೆ ಹೊರಬಿದ್ದಿದೆ. ಇದರಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಒಳಗಾಗಿದೆ.

‘‘ನಾನು ನನ್ನನ್ನು ರಾಮ ಎಂದು ಪರಿಗಣಿಸುವುದಿಲ್ಲ. ಆದುದರಿಂದ ದಲಿತರ ಮನೆಯಲ್ಲಿ ಆಹಾರ ಸೇವಿಸಿ ಅವರನ್ನು ಪವಿತ್ರಗೊಳಿಸಲು ಸಾಧ್ಯವಿಲ್ಲ. ಅದರ ಬದಲು ದಲಿತರನ್ನು ನನ್ನ ನಿವಾಸಕ್ಕೆ ಆಹ್ವಾನಿಸುತ್ತೇನೆ ಹಾಗೂ ಅವರಿಗೆ ವೈಯುಕ್ತಿಕವಾಗಿ ಊಟ ಹಾಕುತ್ತೇನೆ’’ ಎಂದು ನೌಗಾಂವ್‌ನ ಗಧಮಾವು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಭೋಜನ ಕೂಟದಲ್ಲಿ ಆಹಾರ ಸೇವಿಸಲು ನಿರಾಕರಿಸಿರುವ ಉಮಾ ಭಾರತಿ ಹೇಳಿದ್ದಾರೆ.

‘‘ದಲಿತರು ನಮ್ಮ ಮನೆಗೆ ಆಗಮಿಸಿ ಹಾಗೂ ನಮ್ಮೊಂದಿಗೆ ಆಹಾರ ಸೇವಿಸಿದರೆ, ಆಗ ನಾವು ಪವಿತ್ರರಾಗುತ್ತೇವೆ. ನನ್ನ ಮನೆಯಲ್ಲಿ ನನ್ನ ಕೈಯಿಂದಲೇ ದಲಿತರಿಗೆ ಬಡಿಸಿದರೆ ನನ್ನ ಮನೆ ಪಾವನವಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

ಈ ನಡುವೆ, ಉಮಾ ಭಾರತಿ ಅವರ ಹೇಳಿಕೆಗೆ ತದ್ವಿರುದ್ಧವಾಗಿ ಆದಿತ್ಯನಾಥ್ ಸಂಪುಟದ ಸಚಿವ ರಾಜೇಂದ್ರ ಪ್ರತಾಪ್ ಬಿಜೆಪಿ ನಾಯಕರು ಹಾಗೂ ಶ್ರೀರಾಮನನ್ನು ಪರಸ್ಪರ ಹೋಲಿಕೆ ಮಾಡಿದ್ದಾರೆ. ಶಬರಿ (ದಲಿತೆ) ನೀಡಿದ ಭೋಜನವನ್ನು ಶ್ರೀರಾಮ ಸ್ವೀಕರಿಸಿ ಆಶೀರ್ವದಿಸಿದಂತೆ ಬಿಜೆಪಿ ನಾಯಕರು ಕೂಡ ದಲಿತರ ಮನೆಯಲ್ಲಿ ಆಹಾರ ಸೇವಿಸಿ ಅವರನ್ನು ಆಶೀರ್ವದಿಸಬೇಕು ರಾಜೇಂದ್ರ ಪ್ರತಾಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News