ಇರಾನ್: ಲಘು ಭೂಕಂಪ; 31 ಮಂದಿಗೆ ಗಾಯ

Update: 2018-05-02 16:52 GMT

ಟೆಹರಾನ್, ಮೇ 2: ದಕ್ಷಿಣ ಇರಾನ್‌ನ ಗುಡ್ಡಗಾಡು ಪ್ರದೇಶವೊಂದರಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 31 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಭೂಕಂಪದಿಂದಾಗಿ ವಿದ್ಯುತ್ ಮತ್ತು ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಟೆಹರಾನ್‌ನಿಂದ ದಕ್ಷಿಣಕ್ಕೆ ಸುಮಾರು 700 ಕಿ.ಮೀ. ದೂರದಲ್ಲಿರುವ ಸಿಸಖ್ತ್ ಎಂಬ ಪಟ್ಟಣದಲ್ಲಿ ಭೂಕಂಪ ಸಂಭವಿಸಿದ್ದು, ಜನರು ಭೀತಿಯಿಂದ ರಸ್ತೆಗಳಿಗೆ ಓಡಿದರು. ಈ ಪಟ್ಟಣದಲ್ಲಿ ಸುಮಾರು 10,000 ಜನಸಂಖ್ಯೆಯಿದೆ.

ಇರಾನ್ ಭೂಕಂಪ ವಲಯವಾಗಿದ್ದು ಇಲ್ಲಿ ಪ್ರತಿದಿನವೆಂಬಂತೆ ಭೂಮಿ ನಡುಗುತ್ತದೆ. ಕಳೆದ ವರ್ಷದ ನವೆಂಬರ್‌ನಲ್ಲಿ 7.2ರ ತೀವ್ರತೆಯ ಭೂಕಂಪ ಸಂಭವಿಸಿದ್ದು, 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News