ಬಿಜೆಪಿ ಶಾಸಕ, ಅಭ್ಯರ್ಥಿ ವಿಜಯ ಕುಮಾರ್ ನಿಧನ

Update: 2018-05-04 12:48 GMT

ಬೆಂಗಳೂರು, ಮೇ 4: ಇಲ್ಲಿನ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ಬಿ.ಎನ್.ವಿಜಯಕುಮಾರ್(60) ಗುರುವಾರ ತಡರಾತ್ರಿ ನಿಧನರಾಗಿದ್ದು, ಚಾಮರಾಜಪೇಟೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಬಹುದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ ಕುಮಾರ್ ಅವರು, 2008 ಮತ್ತು 2013ರಲ್ಲಿ ಜಯನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಚುನಾವಣಾ ಪ್ರಚಾರದ ವೇಳೆ ಹಠಾತ್ತನೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು.

ನಿನ್ನೆ ಸಂಜೆ 7ಗಂಟೆಯ ಸುಮಾರಿಗೆ ಅವರನ್ನು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತಂದಾಗಲೇ ಅವರ ಹೃದಯ ಬಡಿತ, ರಕ್ತದ ಒತ್ತಡ ಕುಸಿದಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1 ಗಂಟೆ ಸುಮಾರಿಗೆ ವಿಜಯಕುಮಾರ್ ಸಾವನ್ನಪ್ಪಿದ್ದಾರೆಂದು ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ.

1958ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವಿಜಯಕುಮಾರ್ ಎಚ್‌ಎಎಲ್ ಮತ್ತು ಆರ್‌ವಿ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಪದವಿ ಪಡೆದಿದ್ದರು. 1990ರಲ್ಲಿ ಬಿಜೆಪಿ ಸೇರಿದ್ದ ಅವರು, ಪಕ್ಷದ ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ 12 ವರ್ಷಗಳ ಕಾಲ ದುಡಿದಿದ್ದರು. ನಂತರ ನಗರ ಘಟಕ ಅಧ್ಯಕ್ಷರಾದ ಅವರು, ಕೊನೆಗಾಲದವರೆಗೂ ಅವಿವಾಹಿತರಾಗಿ ಜೀವನ ನಡೆಸಿದ್ದರು.

ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಮಾಜಿ ಡಿಸಿಎಂ ಆರ್. ಅಶೋಕ್, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಪಿ.ಸಿ. ಮೋಹನ್ ಸೇರಿ ಹಲವು ಗಣ್ಯರು ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಅನಂತರ ಇಲ್ಲಿನ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಗಣ್ಯರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News