62ರ ಹರೆಯದ ಈ ಅನಕ್ಷರಸ್ಥೆಯ ವರದಿಗಳು ನೀಲಗಿರಿಯ ಹಳ್ಳಿಗಳನ್ನು ರೂಪಾಂತರಿಸುತ್ತಿವೆ!

Update: 2018-05-04 18:36 GMT

ಕೋಟಗಿರಿಯ ಜಾನ್‌ಸ್ಟೋನ್ ಚೌಕದಿಂದ 30 ನಿಮಿಷಗಳ ವಾಹನ ಚಾಲನೆ ನಿಮ್ಮನ್ನು ಅದ್ಭುತ, ರಮಣೀಯ ದೃಶ್ಯಗಳಿಂದ ಆವೃತವಾದ ಒಂದು ಪುಟ್ಟ ಹಳ್ಳಿಯಾಗಿರುವ ಮಾಮರಮ್‌ಗೆ ಒಯ್ಯುತ್ತದೆ. ಈ ನೀಲಗಿರಿ ಹಳ್ಳಿ ನಮ್ಮ ಪ್ರಯಾಣದ ಆರಂಭದ ಬಿಂದುವಾಗಿತ್ತು.

ಕೀಸ್ಟೋನ್ ಫೌಂಡೇಶನ್‌ನ ಓರ್ವ ಸದಸ್ಯೆ ಹಾಗೂ ನನ್ನ ಪ್ರಯಾಣದ ಮಾರ್ಗದರ್ಶಿ ಎನ್. ಸೆಲ್ವಿ ರಸ್ತೆಬದಿಯ ಅಂಗಡಿಯೊಂದರಿಂದ ನಮ್ಮ ಬಾಟಲಿಗಳಿಗೆ ನೀರು ತುಂಬಿಸಿ ಕೆಲವು ಮಸಾಲ ವಡೆಗಳನ್ನು ಕೊಂಡುಕೊಳ್ಳುತ್ತಾರೆ.

ಅಂಗಡಿಯ ಹಿಂಭಾಗದ ಕೆಲವು ಮೆಟ್ಟಲುಗಳನ್ನು ಹತ್ತಿ ಹೋದರೆ ಕಾಲುದಾರಿಯೊಂದು ಸಿಗುತ್ತದೆ. ಮೂಲಭೂತ ಆವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಕೋಟಗಿರಿ ಭಾಗದ ಕುರುಂಬರು ಮತ್ತು ಇರುಳರು ಅತ್ಯಂತ ಸಮೀಪದ ಹಳ್ಳಿಗೆ ಹೋಗಲು ಇದೇ ಕಾಲುದಾರಿ ಬಳಸುತ್ತಾರೆ.

ನೀಲಗಿರಿ ಪ್ರದೇಶದಲ್ಲಿ ನಾವು ಜಾನಕಿ ಅಮ್ಮನನ್ನು ಭೇಟಿಯಾಗಲು ಹೋಗುತ್ತಿರುವ ವಲೆರಿಕೊಂಬಯಿ ಎಂಬ ಶಿಬಿರಕ್ಕೆ ಇಲ್ಲಿಂದ 40 ನಿಮಿಷಗಳ ಟ್ರೆಕಿಂಗ್ ಮಾಡಬೇಕು. ನಾವು ಸಾಗಿ ಹೋಗುವ ಹಾದಿ ಸದಾ ಸ್ನೇಹಮಯಿಯಲ್ಲ. ನಾವು ಇಲ್ಲಿಗೆ ಬರುವ ಕೆಲವೇ ದಿನಗಳ ಮೊದಲು ಸ್ಥಳೀಯನೊಬ್ಬನ ಮೇಲೆ ಕರಡಿಯೊಂದು ದಾಳಿ ನಡೆಸಿತ್ತು. ಆತನನ್ನು ಚಿಕಿತ್ಸೆಗಾಗಿ ಕೊಯಮತ್ತೂರಿಗೆ ಕರೆದುಕೊಂಡು ಹೋಗಬೇಕಾಯಿತು. ಆನೆಗಳು ಇಲ್ಲಿ ಭಾರೀ ಕುಖ್ಯಾತ. ಇದು ಮನುಷ್ಯರು ಬದುಕುವ ತುಂಬಾ ಅಪಾಯಕಾರಿ ರೀತಿ ಅನ್ನಿಸಬಹುದು. ಆದರೆ ಆಲುಕುರುಂಬ ಬುಡಕಟ್ಟಿನ ಜಾನಕಿ ಅಮ್ಮನಿಗೆ ಈ ಅಪಾಯಗಳ ಬಗ್ಗೆ ಸುತರಾಂ ಚಿಂತೆಯಿಲ್ಲ.

ಸ್ವಲ್ಪ ಹೊತ್ತಿನ ಬಳಿಕ ನಾವು ಅರವತ್ತರ ಹರೆಯದ ಜಾನಕಿ ತನ್ನ ಹದಿನೈದರ ಹರೆಯದ ಮಗಳು ಶಿವಮ್ಮ ಮತ್ತು ಇನ್ನೊಬ್ಬ ಸಂಬಂಧಿಯ ಜೊತೆ ವಾಸಿಸುತ್ತಿರುವ ಗುಡಿಸಲು ತಲುಪಿದೆವು. ಅವರಿಗೆ ಈಗ ದೊಡ್ಡ ಶತ್ರುಗಳು ಎಂದರೆ ಅವರ ಕೈತೋಟದಲ್ಲಿ ಅವರು ಬೆಳೆಸುವ ಬೀಟ್‌ಗಳನ್ನು ಹಾಳುಗೆಡಹುವ ಆಡುಗಳು; ಆನೆ ಅಥವಾ ಕರಡಿಗಳಲ್ಲ. ‘‘ನನ್ನಲ್ಲಿ ಈಗ ಕೆಲವೇ ಕೆಲವು ಟೊಮೆಟೊ ಗಿಡಗಳು ಉಳಿದಿವೆ. ಆ ಆಡುಗಳು ದೊಡ್ಡ ಉಪಟಳ’’ ಎಂದು ಸಿಟ್ಟಾಗುತ್ತಾ ಹೇಳುತ್ತಾರೆ ಜಾನಕಿ ಅಮ್ಮ.

ಅವರನ್ನು ಕಾಣಲು ಬಂದಿರುವ ನಮ್ಮನ್ನು ಮುಗುಳು ನಗೆಯೊಂದಿಗೆ ಸ್ವಾಗತಿಸುತ್ತಾರೆ. ಒಂದು ಸಮುದಾಯ ವಾರ್ತಾಪತ್ರವಾಗಿರುವ ‘ಸೀಮೈ ಸುಧಿ’ಗೆ ವರದಿ ಮಾಡುವ ಅತ್ಯಂತ ಹಿರಿಯ ಮಹಿಳಾ ವರದಿಗಾರ್ತಿ ಜಾನಕಿ ಅಮ್ಮ. ಆಕೆಯ ನಿರಕ್ಷರತೆ ಆಕೆಗೆ ತೊಡಕಾಗಲಿಲ್ಲ. ಕೆಲವು ವರ್ಷಗಳ ಹಿಂದೆ ತೀರಿಕೊಂಡ ಗಂಡನ ಪ್ರೋತ್ಸಾಹದಿಂದಾಗಿ, ಆಕೆ ತನ್ನ ಹಾಗೂ ತನ್ನ ಸುತ್ತಮುತ್ತಲ ಜನರ ಬದುಕನ್ನು ಬದಲಾಯಿಸುವ ಒಂದು ವೃತ್ತಿಯನ್ನು ಆಯ್ದುಕೊಂಡರು.

ಹೊಸ ಹಾದಿ ತುಳಿದಾಗ
 ಸುಮಾರು ಒಂದು ದಶಕದ ಹಿಂದೆ, 2007ರಲ್ಲಿ ಜಾನಕಿ ತನ್ನ ಪತ್ರಿಕೋದ್ಯಮ ಆರಂಭಿಸಿದರು. ಕೀಸ್ಟೋನ್‌ನ ಮಾಸಿಕ ವಾರ್ತಾಪತ್ರ, ‘ಸೀಮೈ ಸುಧಿ’ಗಾಗಿ ವರದಿ ಮಾಡಲು ಆಕೆ ನೆರೆಕರೆಯ ಹಲವು ಹಳ್ಳಿಗಳಿಗೆ ಹೋಗಬೇಕಾಗುತ್ತದೆ. ನೀಲಗಿರಿ ಪ್ರದೇಶದಲ್ಲಿರುವ ಬುಡಕಟ್ಟು ಆದಿವಾಸಿ ಜನರಿಗಾಗಿ ಕೀಸ್ಟೋನ್ 2007ರಲ್ಲಿ ಸಮುದಾಯ ವಾರ್ತಾಪತ್ರವನ್ನಾರಂಭಿಸಿತು. ಅದರ ಮಾಸಿಕ ಆವೃತ್ತಿಗಳಲ್ಲಿ ನೆರೆಕೆರೆಯ ಹಳ್ಳಿಗಳ ಸುದ್ದಿಗಳು ಪ್ರಕಟವಾಗುತ್ತಿದ್ದವು; ಆ ಮೂಲಕ ಅವು ಸಮುದಾಯದ ಸದಸ್ಯರನ್ನು ಹತ್ತಿರ ತರುವ ಕೆಲಸ ಮಾಡಿತು. ಈಗ ವಾರ್ತಾಪತ್ರಿಕೆ ತಿಂಗಳಿಗೆ ಮೂರು ಬಾರಿ ಪ್ರಕಟವಾಗುತ್ತದೆ. ಅದು ಆರಂಭಗೊಂಡಾಗ 22 ಮಂದಿ ವರದಿಗಾರ್ತಿಯರು ಹಾಗೂ 8 ಮಂದಿ ವರದಿಗಾರರಿದ್ದರು. ಈಗ 12ರ ಹರೆಯದ ಓರ್ವ ಬಾಲಕಿಯೂ ಸೇರಿದಂತೆ 8 ಮಂದಿ ವರದಿಗಾರ್ತಿಯರು ಮಾತ್ರ ಇದ್ದಾರೆ. ಕೀಸ್ಟೋನ್ ಪ್ರತಿಷ್ಠಾನ ತನ್ನದೇ ಆದ ‘ರೇಡಿಯೋ ಕೋಟಗಿರಿ’ ಎಂಬ ಒಂದು ರೇಡಿಯೋ ಚಾನೆಲ್ ಅನ್ನು ಕೂಡಾ ಹೊಂದಿದೆ. ಕೃಷಿತಂತ್ರಗಳು, ಆರೋಗ್ಯ ಸೇವೆ ಮತ್ತಿತರ ಜನಜಾಗೃತಿ ಕಾರ್ಯಕ್ರಮಗಳು ಈ ಚಾನೆಲ್‌ನಲ್ಲಿ ಪ್ರಕಟವಾಗುತ್ತವೆ.

‘ಸೀಮೈ ಸುಧಿ’ಯ ಆರಂಭದಿಂದಲೂ ಜಾನಕಿಯಮ್ಮ ಅದರ ಒಂದು ಭಾಗವಾಗಿದ್ದಾರೆ. ಓದು ಬರಹವಿಲ್ಲ. ಆಕೆ ಇಡೀ ತಿಂಗಳಲ್ಲಿ ಸಂಗ್ರಹಿಸುವ ಸುದ್ದಿಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ. ಬಳಿಕ ಅದನ್ನೆಲ್ಲ ಆಕೆ ತನ್ನ ಮಗಳಿಗೆ ಹೇಳಿ ಬರೆಸುತ್ತಾರೆ ಅಥವಾ ನೇರವಾಗಿ ಕೀಸ್ಟೋನ್ ಕಚೇರಿಗೆ ಹೋಗಿ ಸೆಲ್ವಿಗೆ ವರದಿ ಮಾಡುತ್ತಾರೆ. ಸೆಲ್ವಿ ಅದನ್ನು ಬರೆದುಕೊಳ್ಳುತ್ತಾರೆ. ಅತ್ಯಂತ ಕುತೂಹಲದ ವಿಷಯವೆಂದರೆ ಜಾನಕಿ ಈ ಎಲ್ಲ ಹಳ್ಳಿಗಳಿಗೆ ನಡೆದುಕೊಂಡೇ ಹೋಗುತ್ತಾರೆ. ಹಳ್ಳಿಗರೊಂದಿಗೆ ಮಾತಾಡಿ ಎಲ್ಲೆಲ್ಲಿಗೆ ಬೀದಿ ದೀಪಗಳು ಬೇಕು, ವಿದ್ಯುತ್ ಬೇಕು ಅಥವಾ ರಸ್ತೆ ರಿಪೇರಿಯಾಗಬೇಕೆಂದು ತಿಳಿದುಕೊಂಡು ಆ ಎಲ್ಲ ಸ್ಥಳಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ತನ್ನ ಬುಡಕಟ್ಟಿನವರಂತೆಯೇ ಧೈರ್ಯಶಾಲಿ
ಎಲ್ಲ ನೀಲಗಿರಿ ಬುಡಕಟ್ಟುಗಳಲ್ಲಿ ಕುರುಂಬರು ಅತ್ಯಂತ ಸಾಹಸಪ್ರಿಯರು. ಅವರು ನುರಿತ ಅರಣ್ಯ ನಿವಾಸಿಗಳು. ತಮ್ಮ ಧೈರ್ಯಕ್ಕಾಗಿ ಪ್ರಸಿದ್ಧರು. ಅಲ್ಲದೆ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹಾಗೂ ಮಾಯ-ಮಂತ್ರಕ್ಕೆ ಕೂಡ ಅವರು ಪ್ರಸಿದ್ಧರು.

ಜಾನಕಿ ಅಮ್ಮ ಅರಣ್ಯ ಔಷಧಿಗಳಿಗಾಗಿ ಹೆಸರುವಾಸಿ. ಚಿಕ್ಕಪುಟ್ಟ ಕಾಯಿಲೆಗಳಾದಾಗ ಜನ ಅವರ ಬಳಿ ಹೋಗುತ್ತಾರೆ. ಗರ್ಭಿಣಿಯರು ಆಕೆಯ ಸಲಹೆ ಕೇಳುತ್ತಾರೆ. ‘‘ನಾಲ್ಕು ಬಾರಿ ಹೆತ್ತಾಗಲೂ ನಾನೇ ನನಗೆ ಹೆರಿಗೆ ಮಾಡಿಸಿಕೊಂಡೆ. ನಾನು ಹೆತ್ತಾಗ ಯಾರನ್ನೂ ಒಳಕ್ಕೆ ಬಿಡಲಿಲ್ಲ’’ ಅನ್ನುತ್ತಾರೆ ಜಾನಕಿ.

ಸಸ್ಯಗಳ ಹೆಸರು ಗೊತ್ತಿಲ್ಲದಿದ್ದರೂ ಒಂದು ಸಸ್ಯವನ್ನು ನೋಡಿದಾಗ ಅದು ಯಾವ ಕಾಯಿಲೆಗೆ ಔಷಧಿ ಎಂದು ಅವರಿಗೆ ತಿಳಿದುಬಿಡುತ್ತದೆ. ‘‘ಮೂಲವ್ಯಾಧಿ ಗುಣಪಡಿಸಲು ಒಂದು ಬೇರು ಇದೆ. ಬೇಕಿದ್ದರೆ ನಾನು ನಿಮಗೆ ಅದನ್ನು ತೋರಿಸಬಲ್ಲೆ. ಆದರೆ ಅದಕ್ಕಾಗಿ ಕಾಡಿನಲ್ಲಿ ಇನ್ನೂ ತುಂಬಾ ಒಳಗೆ ಹೋಗಬೇಕಾಗುತ್ತದೆ’’ ಎಂದರು ಜಾನಕಿ. ಆರೋಗ್ಯ ಕೇಂದ್ರಕ್ಕೆ ಹೋಗುವಂತೆ ಜನರನ್ನು ಪ್ರೋತ್ಸಾಹಿಸುವ ಜಾನಕಿ, ಆಸ್ಪತ್ರೆ ಮತ್ತು ಹಳ್ಳಿಗರ ಮಧ್ಯೆ ಒಬ್ಬ ಸಂದೇಶವಾಚಕಿಯಾಗಿಯೂ ಕೆಲಸ ಮಾಡುತ್ತಾರೆ. ಜಾನಕಿ ಮತ್ತು ಅವರ ನೆರೆಕರೆಯವರು ತರಕಾರಿ ಮತ್ತು ಇತರ ಆವಶ್ಯಕ ಜಿನಸಿಗಾಗಿ ಸಮೀಪದ ಹಳ್ಳಿಗೆ ನಡೆದೇ ಹೋಗಬೇಕು. ಹಳ್ಳಿಯ ಸುದ್ದಿಯನ್ನು ಸಂಗ್ರಹಿಸುವ ದಿನಗಳಲ್ಲಿ ಜಾನಕಿ ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಟು ಮುಸ್ಸಂಜೆ ವೇಳೆಗಷ್ಟೇ ಮನೆಗೆ ಮರಳುತ್ತಾರೆ.

ನಾವು ಹೊರಡುವ ಮೊದಲು ಇನ್ನೊಂದು ಬದಿಯಲ್ಲಿರುವ ಬೆಟ್ಟದ ಕಡೆಗೆ ಕೈ ತೋರಿಸಿ ಜಾನಕಿ ಹೇಳುತ್ತಾರೆ: ‘‘ಆನೆಗಳು ಹೆಚ್ಚಾಗಿ ಬರುವುದು ಅಲ್ಲಿ. ಅವುಗಳು ನೀರಿನ ಪೈಪ್‌ಲೈನ್‌ಗಳನ್ನು ಒಡೆದು ಹಾಕುತ್ತವೆ. ಮತ್ತು ಒಮ್ಮಾಮ್ಮೆ ತುಂಬಾ ಅಪಾಯಕಾರಿಯಾಗಬಲ್ಲವು. ಆನೆಗಳನ್ನಾದರೂ ನಿಭಾಯಿಸಬಹುದು, ಆದರೆ ಬೆಳೆ ತಿನ್ನಲು ಬರುವ ಆಡುಗಳು ಮಾತ್ರ.....’’ ಎನ್ನುತ್ತಾ ಅವರು ನಮ್ಮನ್ನು ಬೀಳ್ಕೊಡುತ್ತಾರೆ.

ಕೃಪೆ: thenewsminute

Writer - ಅಂಜನಾ ಶೇಖರ್

contributor

Editor - ಅಂಜನಾ ಶೇಖರ್

contributor

Similar News