ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ; ಓರ್ವ ಮೃತ್ಯು
ಬೆಂಗಳೂರು, ಮೇ.6: ಗ್ಯಾಸ್ ಏಜೆನ್ಸಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಬ್ಬರು ಮೃತಪಟ್ಟು, ಕಟ್ಟಡ ಕುಸಿದ ದುರ್ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕಾಡುಗೋಡಿ ನಿವಾಸಿ ಅಫ್ಸರ್ ಪಾಷಾ(24) ಮೃತಪಟ್ಟಿದ್ದು, ಘಟನೆಯಲ್ಲಿ ಸುಲ್ತಾನಾ(25) ಎಂಬಾಕೆ ಸೇರಿದಂತೆ ಇಬ್ಬರು ಮಕ್ಕಳು ಗಾಯಗೊಂಡು, ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ಘಟನೆ ವಿವರ: ರವಿವಾರ ಬೆಳಗ್ಗೆ 10:30ಕ್ಕೆ ನಗರದ ಕಾಡುಗೋಡಿಯ ಬಾಪೂಜಿ ಸರ್ಕಲ್ ನ ನೆಲಮಹಡಿಯಲ್ಲಿ ಗ್ಯಾಸ್ ಏಜೆನ್ಸಿ ಮತ್ತು ಸೈಕಲ್ ಶಾಪ್ ಹಾಗೂ ಅದರ ಮೇಲ್ಭಾಗದಲ್ಲಿ ಮನೆ ಇದ್ದು, ಏಕಾಏಕಿ ಸಿಲಿಂಡರ್ ಸ್ಫೋಟಕ್ಕೆ ಏಜೆನ್ಸಿಯ ಮೇಲ್ಛಾವಣಿ ಕುಸಿದುಬಿದ್ದಿದೆ ಎನ್ನಲಾಗಿದೆ.
ಕಟ್ಟಡದ ಒಳಗೆ ನಾಲ್ಕೈದು ಮಂದಿ ಇದ್ದು, ಇವರಲ್ಲಿ ಅಪ್ಸರ್ ಪಾಷ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಲ್ಲದೇ ಇಬ್ಬರು ಮಕ್ಕಳು ಸೇರಿದಂತೆ ಓರ್ವನನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿ ಕಟ್ಟಡದ ಅವಶೇಗಳನ್ನ ತೆರವುಗೊಳಿಸುತ್ತಿದ್ದಾರೆ.
ಅದೇ ರೀತಿ, ಕಟ್ಟಡದ ಕೆಳಗೆ ಸಿಲುಕಿರುವವರ ಬಗ್ಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಕಟ್ಟಡದಲ್ಲಿ ಅಕ್ರಮವಾಗಿ ಗ್ಯಾಸ್‌ಫಿಲ್ ಮಾಡಲಾಗುತ್ತಿತ್ತು ಹೀಗಾಗಿಯೇ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಕಾಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.