×
Ad

ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿ: ಸಂಜೀವ್ ಕುಮಾರ್

Update: 2018-05-06 19:27 IST

ಬೆಂಗಳೂರು, ಮೇ 6: ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿಯಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ರವಿವಾರ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಚುನಾವಣಾ ಆಯೋಗದಿಂದ ಆಯೋಜಿಸಿದ್ದ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸ್ವಯಂ ವಿವೇಚನೆಯಿಂದ ಮತದಾನ ಮಾಡಬೇಕು. ಮತ ಹಾಕುವುದು ಎಲ್ಲರ ಹಕ್ಕು. ಆ ಹಕ್ಕನ್ನು ಚಲಾಯಿಸುವ ಮೂಲಕ ಸಮರ್ಥ ಸರಕಾರ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ನಗರದಲ್ಲಿ ಪ್ರತಿ ಚುನಾವಣೆಯಲ್ಲಿಯೂ ಶೇ.40 ರಿಂದ 50 ರಷ್ಟು ಮತದಾನ ಮಾತ್ರ ನಡೆಯುತ್ತಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಶೇ.70 ರಿಂದ 80ರಷ್ಟು ಮತದಾನವಾಗುತ್ತಿದೆ. ಅದೇ ರೀತಿಯಲ್ಲಿ ನಗರ ಪ್ರದೇಶದಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇ.100ರಷ್ಟು ಮತದಾನ ನಡೆಯಬೇಕು. ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮತ ಹಾಕಬೇಕು ಎಂದು ಹೇಳಿದರು.

ಚಿತ್ರ ನಿರ್ದೇಶಕ ರಿಶಿಫ್ ಶೆಟ್ಟಿ ಮಾತನಾಡಿ, ನಾವು ಮತದಾನ ಮಾಡದೇ ರಾಜಕೀಯ ಪಕ್ಷಗಳು ಸರಿಯಿಲ್ಲ, ನಾಯಕರು ಸರಿಯಿಲ್ಲ, ಕಾರ್ಯಕರ್ತರು ಸರಿಯಿಲ್ಲ ಎಂದು ಬೆರಳು ತೋರಿಸುತ್ತೇವೆ. ಅದರ ಬದಲಿಗೆ ನಮ್ಮ ಹಕ್ಕನ್ನು ಚಲಾವಣೆ ಮಾಡುವ ಮೂಲಕ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳೋಣ ಎಂದು ತಿಳಿಸಿದರು.

ನಮ್ಮ ಜವಾಬ್ದಾರಿಯನ್ನು ಮರೆಯುವ ಮೂಲಕ ನಮ್ಮ ಅಭಿವೃದ್ಧಿ ಮಾಡದವರು ಆಯ್ಕೆಯಾಗುತ್ತಿದ್ದಾರೆ. ಆದುದರಿಂದಾಗಿ ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪರವಾದ, ಸಮಾಜದ ಅಭಿವೃದ್ಧಿ ಪರವಾಗಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಲುವಾಗಿ ಪ್ರತಿಯೊಬ್ಬರೂ ಮತ ಚಲಾವಣೆ ಮಾಡಬೇಕು ಎಂದು ನುಡಿದರು.

ಸಾಮಾಜಿಕ ಕಾರ್ಯಕರ್ತ ಕಿಶೋರ್ ಮಾತನಾಡಿ, ರಾಜಕಾರಣಿಗಳನ್ನು ಭ್ರಷ್ಟರೆಂದು ಟೀಕೆ ಮಾಡುತ್ತೇವೆ. ಆದರೆ, ಚುನಾವಣೆ ದಿನದಂದು ಮತ್ತದೇ ಭ್ರಷ್ಟರಿಗೆ ಮತ ಹಾಕುತ್ತಿದ್ದೇವೆ. ಆ ಮೂಲಕ ಅವರು ಮತ್ತಷ್ಟು ದೋಚಿಕೊಳ್ಳಲು ನಾವೇ ಅವಕಾಶ ಮಾಡಿಕೊಡುತ್ತಿದ್ದೇವೆ. ಆದರೆ, ಈ ಚುನಾವಣೆಯಲ್ಲಿ ಭ್ರಷ್ಟರನ್ನು, ಸಮಾಜದ ಅಭಿವೃದ್ಧಿ ಮಾಡದವರನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ನಮ್ಮ ಪರವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.

ಕಂಠೀರವ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್ ಕಸ್ತೂರ ಬಾ ರಸ್ತೆ ಮೂಲಕ ಹಾದು ಚಿನ್ನಸ್ವಾಮಿ ಕ್ರೀಡಾಂಗಣ, ಎಚ್‌ಎಎಲ್ ವೃತ್ತ, ಜಿಪಿಒ ವೃತ್ತ, ವಿಧಾನಸೌಧ ಮುಂಭಾಗದಿಂದ ಕಾರ್ಪೋರೇಷನ್ ವೃತ್ತದ ಮೂಲಕ ಕಂಠೀರ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತು.

ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ಮಮತ, ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್, ಅಧಿಕಾರಿಗಳಾದ ವೈಷ್ಣವಿ, ವನಿತ ಅಶೋಕ್, ಕಾಜಲ್ ಘಾಟಿಯಾ, ಸೂರ್ಯಸಿಂಗ್, ರಾಘವೇಂದ್ರ, ಡಾ.ಹರ್ಷ, ರವೀಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News