‘ಮಾಂಸ ಪ್ರದರ್ಶನ’ದ ಮೂಲಕ ಪಕ್ಷೇತರ ಅಭ್ಯರ್ಥಿಯ ವಿನೂತನ ಚಳವಳಿ

Update: 2018-05-06 14:18 GMT

ಬೆಂಗಳೂರು, ಮೇ 6: ಆಹಾರ ಹಕ್ಕಿನ ಮೇಲಿನ ದಾಳಿ ಖಂಡಿಸಿ ಮಾಂಸ ಪ್ರದರ್ಶನ ಮಾಡುವ ಮೂಲಕ ಶಿವಾಜಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೂ ಆಗಿರುವ ‘ಮೌನಿ’ ಆಂಬ್ರೋಸ್ ಡಿ.ಮೆಲ್ಲೊ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ರವಿವಾರ ಇಲ್ಲಿನ ಶಿವಾಜಿನಗರದ ರಸೆಲ್ ಮಾರುಕಟ್ಟೆ ಆವರಣದಲ್ಲಿ ಕೋಳಿ, ಕುರಿ ಸೇರಿದಂತೆ ಇನ್ನಿತರೆ ಪ್ರಾಣಿಗಳ ಮಾಂಸವನ್ನು ಪ್ರದರ್ಶಿಸಿ ಆಹಾರ ಹಕ್ಕಿನ ಮೇಲಿನ ಸಂಘ ಪರಿವಾರದ ಕ್ರೂರ ದಾಳಿಯನ್ನು ಆಂಬ್ರೋಸ್ ತೀವ್ರವಾಗಿ ಖಂಡಿಸಿದ್ದಾರೆ.

ಮನೆಯಲ್ಲಿ ಮಾಂಸ ತಿನ್ನುವುದು, ಮಾರಾಟ ಮಾಡುವುದನ್ನು ಅಪರಾಧವೆಂದು ಪರಿಗಣಿಸಿ ನೈತಿಕ ಪೊಲೀಸ್ ಗಿರಿ ನಡೆಸಲಾಗುತ್ತಿದೆ. ಇದೊಂದು ಸಂಘಟಿತ ದಾಳಿಯಾಗಿದ್ದು, ಈ ಕೃತ್ಯವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೆ, ಇದುವರೆಗೂ ಆಹಾರ ಹಕ್ಕುಗಳಿಗೆ ಸಂಬಂಧಪಟ್ಟಂತೆ ನಡೆದ ಪ್ರಕರಣಗಳಿಗೆ ನ್ಯಾಯ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.

ಮನುಷ್ಯರಲ್ಲಿರುವ ಮೇಲು-ಕೀಳು ಎಂಬ ಭೇದವನ್ನು ಪ್ರಾಣಿಗಳ ಮಾಂಸಕ್ಕೂ ಹೇರುವ ಮೂಲಕ ‘ಮಾಂಸಾಹಾರದ ತಾರತಮ್ಯ’ ಉಂಟು ಮಾಡುವ ಜೊತೆಗೆ ಶ್ರಮಿಕರಲ್ಲಿ ಕೀಳರಿಮೆ, ಭಯ, ಅಪೌಷ್ಠಿಕತೆ ಸೃಷ್ಠಿಸುತ್ತಿದ್ದಾರೆ. ಅಲ್ಲದೆ, ಜನತೆಯ ಮನಸ್ಥಿತಿಗಳನ್ನು ಒಡೆಯುತ್ತಿದ್ದಾರೆ. ಅಲ್ಲದೆ, ಕೆಲ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಮತಗಳನ್ನು ಕಸಿದು ಅಧಿಕಾರಕ್ಕೇರುತ್ತಿದ್ದಾರೆ. ಇದರ ವಿರುದ್ದ ನಿರಂತರ ಹೋರಾಟಗಳು ಅಗತ್ಯ ಎಂದು ಅವರು ಇದೇ ವೇಳೆ ಪ್ರತಿಪಾದನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News