ಕೇಂದ್ರ ಸರಕಾರ ಕುಶಲಕರ್ಮಿಗಳನ್ನು ಕಡೆಗಣಿಸಿದೆ: ರಂಗಕರ್ಮಿ ಪ್ರಸನ್ನ ಆರೋಪ

Update: 2018-05-06 14:33 GMT

ಬೆಂಗಳೂರು, ಮೇ 6: ಇತ್ತೀಚಿಗೆ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಬೃಹತ್ ಹಾಗೂ ಇತರೆ ಕೈಗಾರಿಕೆಗಳಿಗೆ ಹಲವು ರಿಯಾಯಿತಿಗಳನ್ನು ನೀಡಿದ್ದಾರೆ. ಆದರೆ, ಗ್ರಾಮೀಣ ಕುಶಲಕರ್ಮಿಗಳು ಇವರಿಗೆ ಕಾಣಸಲಿಲ್ಲವೇ? ಎಂದು ಹಿರಿಯ ರಂಗಕರ್ಮಿ ಹಾಗೂ ಹೋರಾಟಗಾರ ಪ್ರಸನ್ನ ಪ್ರಶ್ನಿಸಿದ್ದಾರೆ.

ರವಿವಾರ ಇಲ್ಲಿನ ಪುರಭವನದ ಮುಂಭಾಗದಲ್ಲಿ ಕೈ ಉತ್ಪನ್ನಗಳ ಮೇಲೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿ ಗ್ರಾಮ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್ಟಿ ಅಡಿಯಲ್ಲಿ ಕೈ ಉತ್ಪನ್ನಗಳನ್ನು ತರಲಾಗಿದೆ. ಇದರಿಂದಾಗಿ ಸಾವಿರಾರು ಕುಶಲಕರ್ಮಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕೈ ಉತ್ಪನ್ನಗಳ ಮೇಲೆ ಜಿಎಸ್ಟಿ ಹಾಕಿರುವುದನ್ನು ಖಂಡಿಸಿ ನಿರಂತರವಾದ ಹೋರಾಟ ಮಾಡುತ್ತಿದ್ದರೂ ಆಡಳಿತದಲ್ಲಿರುವ ಬಿಜೆಪಿ ಸರಕಾರ ಕೈ ಕುಶಲ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕೈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ರದ್ದು ಮಾಡುವ ಭರವಸೆ ನೀಡಲಾಗುತ್ತದೆ ಎಂದು ನಂಬಿದ್ದೆವು. ಆದರೆ, ನಮ್ಮ ನಂಬಿಕೆ ಹುಸಿಯಾಗಿದೆ ಎಂದ ಅವರು, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ದೇಶದಲ್ಲಿ ಉತ್ಪಾದಕತೆಯ ಶೇ.60 ರಷ್ಟು ನಿಭಾಯಿಸುತ್ತಿರುವ ಕೈ ಉತ್ಪಾದಕ ಜನರು ಇಂದಿಗೂ ದರಿದ್ರವಾಗಿ ಉಳಿದಿರುವುದು ಯಾಕೆ? ನೆಲ, ಭಾಷೆ, ಪ್ರಕೃತಿಯನ್ನು ಕಾಪಾಡುತ್ತಿರುವ ಕೈ ಉತ್ಪಾದಕರ ಮೇಲೆ ಅಸಡ್ಡೆ ಏಕೆ? ಕೈ ಉತ್ಪನ್ನಗಳಿಗೆ ಬೆಲೆ ಸಿಗುವಂತೆ ಮಾಡುವಲ್ಲಿ ಸೋತಿರುವುದೇಕೆ? ಕೂಡಲೇ ಕೈ ಉತ್ಪನ್ನಗಳಿಗೆ ಜಿಎಸ್ಟಿಯಿಂದ ವಿನಾಯ್ತಿ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಚಂದ್ರಜೈನ್, ಸಂತೋಷ್ ಕೌಲಗಿ, ನಳಿನಿ ಶೇಖರ್ ಸೇರಿದಂತೆ ಹಲವಾರು ಹೋರಾಟಗಾರರು, ಚಿಂತಕರು, ರಂಗಭೂಮಿ ಕಲಾವಿದರು ಹಾಗೂ ಕೈ ಉತ್ಪನ್ನಗಳನ್ನು ತಯಾರಿಸುವ ಕಾರ್ಮಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News