×
Ad

ನೀಟ್ ಪರೀಕ್ಷೆ ಬರೆದ 13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

Update: 2018-05-06 20:10 IST

ಬೆಂಗಳೂರು, ಮೇ 6: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ರವಿವಾರ ದೇಶದಾದ್ಯಂತ ನಡೆಯಿತು. ದೇಶದಾದ್ಯಂತ 136 ನಗರಗಳಲ್ಲಿ 13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸುಮಾರು 2 ಸಾವಿರ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಿತು.

ನೀಟ್ ಪರೀಕ್ಷೆ ಉತ್ತರಗಳನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಇದೇ ತಿಂಗಳು ಬಿಡುಗಡೆ ಮಾಡಲಿದೆ. ಜೂನ್ 5ರಂದು ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ 66 ಸೀಟುಗಳಿಗೆ 11 ಭಾಷೆಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದೊಳಗೆ ಕಾಗದದ ಚೂರು, ಇರೇಸರ್, ಮೊಬೈಲ್ ಫೋನ್, ಪೆನ್ಸಿಲ್ ಬಾಕ್ಸ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಯ್ಯಲು ಅವಕಾಶ ಇರಲಿಲ್ಲ. ಅದೇ ರೀತಿ, ಪರ್ಸ್, ಕೈಚೀಲ ಕೊಂಡೊಯ್ಯಲು, ಕನ್ನಡಕ, ಬೆಲ್ಟ್, ಟೋಪಿ, ಆಭರಣ, ಶೂ, ಎತ್ತರ ಚಪ್ಪಲಿಗಳನ್ನು ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಪರೀಕ್ಷೆ ತುಂಬಾ ಕಷ್ಟವಾಗಿರಲಿಲ್ಲ. ಹಾಗೆಯೇ ಸರಳವಾಗಿಯೂ ಇರಲಿಲ್ಲ ಎಂದು ವಿದ್ಯಾರ್ಥಿಗಳು ಅನುಭವ ಹಂಚಿಕೊಂಡಿದ್ದಾರೆ. ನೀಟ್ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಂದ 180 ಆಯ್ಕೆ ಆಧಾರಿತ ಪ್ರಶ್ನೆಗಳನ್ನು ಒಳಗೊಂಡ ಒಂದು ಪತ್ರಿಕೆಯನ್ನು ಹೊಂದಿರುತ್ತದೆ. ಪರೀಕ್ಷಾ ಕೇಂದ್ರದಲ್ಲಿ ನೀಡಲಾಗುವ ನಿರ್ದಿಷ್ಟ ಬಾಲ್ ಪಾಯಿಂಟ್ ಪೆನ್ ಬಳಸಿ ವಿಶೇಷವಾಗಿ ವಿನ್ಯಾಸಪಡಿಸಿರುವ ಶೀಟ್‌ನಲ್ಲಿ ಉ್ತರ ನಮೂದಿಸಬೇಕಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News