×
Ad

ಕರ್ನಾಟಕದ ಮಾಜಿ ದಲಿತ ಮುಖ್ಯಮಂತ್ರಿ ‘ನಿಂಜ’ಲಿಂಗಪ್ಪ ಯಾರು ಗೊತ್ತೇ?

Update: 2018-05-06 21:28 IST

ಬೆಂಗಳೂರು, ಮೇ 6: ರಾಜ್ಯ ವಿಧಾನಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಗೆಲುವು ತಮ್ಮದಾಗಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ವೇದಿಕೆಯಾಗಿರುವುದು ಸಾಮಾಜಿಕ ಜಾಲತಾಣಗಳು. ಅದರಲ್ಲೂ ಟ್ವಿಟರ್. ಪ್ರಮುಖವಾಗಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳು ಟ್ವೀಟ್ ಗಳ ಮೂಲಕವೇ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಚುನಾವಣಾ ಪ್ರಚಾರದಲ್ಲಿದ್ದಾರೆ. 

ಕಾಂಗ್ರೆಸಿಗರು ದಲಿತ ನಾಯಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿ ಟ್ವೀಟ್ ಮಾಡಿದ್ದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಸ್ವತಃ ತಮ್ಮ ಟ್ವೀಟ್ ನಿಂದಲೇ ನಗೆಪಾಟಲಿಗೀಡಾಗಿದ್ದಾರೆ.

ಮೇ 5ರಂದು ಟ್ವೀಟ್ ಮಾಡಿದ್ದ ಅಮಿತ್ ಮಾಳವಿಯ, “ದಲಿತರ ಮೇಲಿರುವ ಕಾಂಗ್ರೆಸ್ ನ ನಕಲಿ ಪ್ರೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಯಲು ಮಾಡುತ್ತಿದ್ದಾರೆ. ಅಂಬೇಡ್ಕರ್ ಹಾಗು ನಿಂಜಲಿಂಗಪ್ಪರಂತಹ ನಾಯಕರನ್ನು ನೆಹರೂ-ಗಾಂಧಿ ಪರಿವಾರ ಹೇಗೆ ನಡೆಸಿಕೊಂಡಿತು ಎಂದವರು ವಿವರಿಸಿದ್ದಾರೆ” ಎಂದಿದ್ದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪರ ಹೆಸರನ್ನು ‘ನಿಂಜಲಿಂಗಪ್ಪ’ ಎಂದು ಬರೆದು ಮಾಳವಿಯ ಎಡವಟ್ಟು ಮಾಡಿಕೊಂಡಿದ್ದಲ್ಲದೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಲಿಂಗಾಯತ ನಾಯಕ ನಿಜಲಿಂಗಪ್ಪರನ್ನು ದಲಿತ ನಾಯಕ ಎಂದು ನಗೆಪಾಟಲಿಗೀಡಾಗಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಈ ಟ್ವೀಟ್ ಗೆ ಕನ್ನಡಿಗರು ತಿರುಗೇಟು ನೀಡಿದ್ದಾರೆ.

“ನಿಂಜ ಏನು? ನೀವು ಪಕ್ಷದ ಐಟಿ ಸೆಲ್ ಮುಖ್ಯಸ್ಥರೇ?, ವಾಟ್ಸ್ಯಾಪ್ ಫಾರ್ವರ್ಡ್ ಬದಲಿಗೆ ಗೂಗಲ್ ಸರ್ಚ್ ನಿಮಗೆ ಸಹಾಯ ಮಾಡೀತು. ವಾಟ್ಸ್ಯಾಪ್ ನಲ್ಲಿ ಸಿಗುವ ಎಲ್ಲವನ್ನೂ ನಂಬಬೇಡಿ ಅಮಿತ್” ಎಂದು ಸೃಜನಾ ದೇವಾ ಟ್ವೀಟ್ ಮಾಡಿದ್ದಾರೆ.

“ಅವರು ದಲಿತರೂ ಅಲ್ಲ ಅವರ ಹೆಸರು ನಿಂಜ-ಲಿಂಗಪ್ಪ ಅಲ್ಲ” ಅದು ನಿಜಲಿಂಗಪ್ಪ” ಎಂದು ಅನ್ ಅಫಿಶಿಯಲ್ ಸುಸುಸ್ವಾಮಿ ಖಾತೆ ಟ್ವೀಟ್ ಮಾಡಿದೆ. ಇನ್ನೊಬ್ಬರು ಕತ್ತಿ ಹಿಡಿದ ನಿಂಜಾ ಫೈಟರ್ ನ ಫೋಟೊ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News