ಸಿವಿಲ್ ಸರ್ವಿಸಸ್ ಪ್ರಿಲಿಮಿನರಿ ಪರೀಕ್ಷೆ : ಅಭ್ಯರ್ಥಿಗಳಿಗೆ ಇ- ಪ್ರವೇಶ ಪತ್ರ

Update: 2018-05-07 14:28 GMT

ಹೊಸದಿಲ್ಲಿ, ಮೇ 7: ಜೂನ್ 3ರಂದು ನಡೆಯಲಿರುವ ಸಿವಿಲ್ ಸರ್ವಿಸಸ್ ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರದ ಪ್ರತಿ ದೊರಕುವುದಿಲ್ಲ. ಅಭ್ಯರ್ಥಿಗಳು ಯುಪಿಎಸ್‌ಸಿ ವೆಬ್‌ಸೈಟ್‌ನಿಂದ ಇ-ಪ್ರವೇಶಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ತಿಳಿಸಿದೆ.

 ಈ ಬಾರಿ ಪೇಪರ್ ಪ್ರವೇಶ ಪತ್ರ ನೀಡಲಾಗುವುದಿಲ್ಲ. ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಇ-ಪ್ರವೇಶ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಅದರ ಪ್ರಿಂಟ್‌ಔಟ್ ತೆಗೆದಿರಿಸಬೇಕು. ತಮಗೆ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಇ-ಪ್ರವೇಶ ಪತ್ರದ ಪ್ರಿಂಟ್‌ಔಟ್ ತೋರಿಸಿ ಪರೀಕ್ಷೆ ಬರೆಯಬಹುದು ಎಂದು ಯುಪಿಎಸ್‌ಸಿ ಪ್ರಕಟಣೆ ತಿಳಿಸಿದೆ. ಒಂದು ವೇಳೆ ಇ-ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳ ಫೋಟೋ ಅಸ್ಪಷ್ಟವಾಗಿದ್ದರೆ ಅಥವಾ ಫೋಟೋವೇ ಇಲ್ಲದಿದ್ದ ಸಂದರ್ಭದಲ್ಲಿ ತಮ್ಮ ಎರಡು ಭಾವಚಿತ್ರ ಹಾಗೂ ಗುರುತು ಪತ್ರದ ಪ್ರತಿಯನ್ನು (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಮತದಾರರ ಗುರುತುಪತ್ರ) ಇ-ಪ್ರವೇಶ ಪತ್ರದೊಂದಿಗೆ ತರಬೇಕು ಹಾಗೂ ಈ ಗುರುತು ಪತ್ರ ವಾಸ್ತವಿಕವಾಗಿದೆ ಎಂಬ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ. ಇ-ಪ್ರವೇಶ ಪತ್ರದಲ್ಲಿ ಯಾವುದಾದರೂ ವ್ಯತ್ಯಾಸವಿದ್ದರೆ ಇ-ಮೇಲ್ ಮೂಲಕ ಯುಪಿಎಸ್‌ಸಿ ಗಮನಕ್ಕೆ ತರಬೇಕು. ಕಡೆ ಕ್ಷಣದಲ್ಲಿ ಇ-ಪ್ರವೇಶ ಪತ್ರ ಪಡೆಯಲು ಧಾವಿಸುವ ಬದಲು ಸಾಕಷ್ಟು ಮೊದಲೇ ಡೌನ್‌ಲೋಡ್ ಮಾಡಿಟ್ಟುಕೊಳ್ಳಬೇಕು ಎಂದು ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ. ಪರೀಕ್ಷೆಯ ದಿನ ನಿಗದಿತ ಸಮಯಕ್ಕಿಂತ 10 ನಿಮಿಷ ಮೊದಲೇ ಅಭ್ಯರ್ಥಿಗಳು ಕೇಂದ್ರದಲ್ಲಿ ಹಾಜರಿರಬೇಕು. ಬೆಳಿಗ್ಗೆ 9:20ರ ಬಳಿಕ ಹಾಗೂ ಅಪರಾಹ್ನ 2:20ರ ಬಳಿಕ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಇ-ಪ್ರವೇಶ ಪತ್ರದಲ್ಲಿ ಸೂಚಿಸಿದ ಕೇಂದ್ರದಲ್ಲೇ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು. ಅಲ್ಲದೆ ಕಪ್ಪು ಬಾಲ್‌ಪಾಯಿಂಟ್ ಪೆನ್‌ನಲ್ಲೇ ಪರೀಕ್ಷೆ ಬರೆಯಬೇಕು ಎಂದು ಯುಪಿಎಸ್‌ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News