ಜಯಲಲಿತಾ ಸ್ಮಾರಕಕ್ಕಾಗಿ ಯಜ್ಞಕ್ಕೆ ಡಿಎಂಕೆ ಆಕ್ಷೇಪ

Update: 2018-05-07 15:58 GMT

ಚೆನ್ನೈ,ಮೇ 7: ಇಲ್ಲಿಯ ಮರೀನಾ ಬೀಚ್‌ನಲ್ಲಿರುವ ಎಂಜಿಆರ್ ಸ್ಮಾರಕದ ಬಳಿ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸ್ಮಾರಕ ನಿರ್ಮಾಣಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ನಡೆಯಿತು. ಇದಕ್ಕಾಗಿ ಜಯಲಲಿತಾರ ಸಮಾಧಿ ಸ್ಥಳದಲ್ಲಿ ನಡೆದ ಯಜ್ಞದಲ್ಲಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ಪಾಲ್ಗೊಂಡಿದ್ದರು.

ಆದರೆ ಸರಕಾರವು ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಂಡಿದ್ದನ್ನು ಆಕ್ಷೇಪಿಸಿರುವ ಡಿಎಂಕೆ,ಇಂತಹ ಕಾರ್ಯಕ್ರಮವು ರಾಜ್ಯದ ಜಾತ್ಯತೀತ ಸಂಸ್ಕೃತಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಈ ಹಿಂದೆಂದೂ ಹೀಗೆ ನಡೆದಿರಲಿಲ್ಲ. ಅವರ ಪಕ್ಷವು ಖಾಸಗಿಯಾಗಿ ಯಜ್ಞ ಮಾಡಿಕೊಳ್ಳಲಿ,ಆದರೆ ಅದು ಸರಕಾರಿ ಕಾರ್ಯಕ್ರಮದ ಭಾಗವಾಗಿರುವಂತಿಲ್ಲ. ಇದು ಬಿಜೆಪಿಯನ್ನು ಓಲೈಸುವ ಮತ್ತು ಅದಕ್ಕೆ ತನ್ನ ನಿಷ್ಠೆಯನ್ನು ತೋರಿಸುವ ಆಡಳಿತ ಎಐಎಡಿಎಂಕೆಯ ಇನ್ನೊಂದು ಪ್ರಯತ್ನವಾಗಿದೆ ಎಂದು ಡಿಎಂಕೆ ವಕ್ತಾರ ಎ.ಶರವಣನ್ ಹೇಳಿದರು.

ಶಿಲಾನ್ಯಾಸ ಕಾರ್ಯಕ್ರಮದ ಮುನ್ನ ಯಜ್ಞವನ್ನು ನಡೆಸಲಾಗಿದೆ. ಯಜ್ಞವನ್ನು ಸರಕಾರಿ ಕಾರ್ಯಕ್ರಮವೆಂದು ಉಲ್ಲೇಖಿಸಲಾಗಿದ್ದರೂ ಅದನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಪರಿಗಣಿಸಬೇಕು ಎಂದು ಅನಾಮಿಕರಾಗುಳಿಯಲು ಬಯಸಿದ ಹಿರಿಯ ಸಚಿವರೋರ್ವರು ಹೇಳಿದರು.

 50 ಕೋ.ರೂ.ವೆಚ್ಚದ ಸ್ಮಾರಕವು ಫೀನಿಕ್ಸ್ ವಿನ್ಯಾಸವನ್ನು ಹೊಂದಿರಲಿದೆ. ಕರಾವಳಿ ನಿಯಂತ್ರಣ ಕಾಯ್ದೆಯು ಮರೀನಾ ಬೀಚ್‌ನಲ್ಲಿ ಹೊಸದಾಗಿ ಸ್ಮಾರಕಗಳ ನಿರ್ಮಾಣವನ್ನು ನಿಷೇಧಿಸಿದೆ. ಹೀಗಾಗಿ ಕಾಯ್ದೆಯಡಿ ನುಸುಳಲು ಜಯಲಲಿತಾರನ್ನು ಸಮಾಧಿ ಮಾಡಲು ಮತ್ತು ಹೊಸ ಸ್ಮಾರಕವನ್ನು ನಿರ್ಮಿಸಲು ಈಗಾಗಲೇ ಇರುವ ಎಂಜಿಆರ್ ಸ್ಮಾರಕ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News