4ನೇ ಅವಧಿಗೆ ಅಧ್ಯಕ್ಷರಾಗಿ ಪುಟಿನ್ ಪ್ರಮಾಣವಚನ

Update: 2018-05-07 16:56 GMT

ಮಾಸ್ಕೊ (ರಶ್ಯ), ಮೇ 7: ವ್ಲಾದಿಮಿರ್ ಪುಟಿನ್ ಸೋಮವಾರ ರಶ್ಯದ ಅಧ್ಯಕ್ಷರಾಗಿ ಇನ್ನೊಂದು 6 ವರ್ಷಗಳ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಗ್ರಾಂಡ್ ಕ್ರೆಮ್ಲಿನ್ ಅರಮನೆಯ ಅಲಂಕೃತ ಆ್ಯಂಡ್ರೆಎವಸ್ಕಿ ಹಾಲ್‌ನಲ್ಲಿ ಚಿನ್ನಲೇಪಿತ ಸಂವಿಧಾನದ ಮೇಲೆ ಕೈಯಿಟ್ಟ ಪುಟಿನ್, ರಶ್ಯದ ಜನರ ಸೇವೆ ಮಾಡುವ, ಅವರ ಹಕ್ಕುಗಳು ಮತ್ತು ಸ್ವಾತಂತ್ರಗಳನ್ನು ರಕ್ಷಿಸುವ ಮತ್ತು ರಶ್ಯದ ಸಾರ್ವಭೌಮತೆಯನ್ನು ಕಾಯ್ದುಕೊಂಡು ಬರುವ ಪ್ರತಿಜ್ಞೆಯನ್ನು ಮಾಡಿದರು.

65 ವರ್ಷದ ಪುಟಿನ್ ನಾಲ್ಕನೆ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು 70 ಶೇಕಡ ಮತಗಳನ್ನು ಗಳಿಸಿ ಗೆದ್ದಿದ್ದರು. ಚುನಾವಣೆಯಲ್ಲಿ ಅವರಿಗೆ ಗಂಭೀರ ಸವಾಲೇ ಇರಲಿಲ್ಲ.

ಅವರ ಅತ್ಯಂತ ಪ್ರಬಲ ಎದುರಾಳಿ ಅಲೆಕ್ಸಿ ನವಾಲಿಯನ್ನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ನಿಷೇಧಿಸಲಾಗಿತ್ತು. ಪುಟಿನ್‌ರ ನೂತನ ಅಧಿಕಾರಾವಧಿಯ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ ಅಲೆಕ್ಸಿ ಮತ್ತು ಅವರ ನೂರಾರು ಬೆಂಬಲಿಗರನ್ನು ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ. ಪ್ರತಿಭಟನಕಾರರು ‘ಪುಟಿನ್ ನಮ್ಮ ಝಾರ್ (ವಂಶಪಾರಂಪರ್ಯ ರಾಜ) ಅಲ್ಲ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ರಶ್ಯದ ಸಂವಿಧಾನದ ಪ್ರಕಾರ, 2024ರಲ್ಲಿ ಅವರ ಅವಧಿ ಮುಗಿದ ಬಳಿಕ ಇನ್ನೊಮ್ಮೆ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News