ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ ನಡೆಸಿದ ರೀತಿ ಜನಾಂಗೀಯ ನಿರ್ಮೂಲನೆಗೆ ಸಮ

Update: 2018-05-07 18:46 GMT

ಢಾಕಾ (ಬಾಂಗ್ಲಾದೇಶ), ಮೇ 7: ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ ನಡೆಸಿಕೊಂಡಿರುವ ರೀತಿಯು ‘‘ಅಂತರ್‌ರಾಷ್ಟ್ರೀಯ ಕಾನೂನಿನ ಗಂಭೀರ ಹಾಗೂ ಸ್ಪಷ್ಟ ಉಲ್ಲಂಘನೆಯಾಗಿದೆ’’ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ಬಣ್ಣಿಸಿದೆ ಹಾಗೂ ಈ ಬಿಕ್ಕಟ್ಟು ನಿವಾರಣೆಯಲ್ಲಿ ಅಂತರ್‌ರಾಷ್ಟ್ರೀಯ ಬೆಂಬಲಕ್ಕಾಗಿ ಕರೆನೀಡಿದೆ.

ಇಲ್ಲಿ ನಡೆದ ಎರಡು ದಿನಗಳ ಸಮ್ಮೇಳನದ ಕೊನೆಯಲ್ಲಿ ರವಿವಾರ ಜಂಟಿ ಸಂಘಟನೆಯು ಜಂಟಿ ಹೇಳಿಕೆಯೊಂದನ್ನು ನೀಡಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ಹಿಂಸಾಚಾರ ಉಲ್ಬಣಿಸಿದ ಬಳಿಕ, 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಅವರು ಬಾಂಗ್ಲಾದೇಶದ ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ಇಸ್ಲಾಮಿಕ್ ದೇಶಗಳ ಈ ಗುಂಪು ವಿಶ್ವಸಂಸ್ಥೆ ಮತ್ತು ಇತರ ಜಾಗತಿಕ ವೇದಿಕೆಗಳೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತದೆ ಎಂದು ಹೇಳಿಕೆ ತಿಳಿಸಿದೆ.

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬ ತನ್ನ ಹಿಂದಿನ ಹೇಳಿಕೆಯನ್ನು ಇಸ್ಲಾಮಿಕ್ ಸಹಕಾರ ಸಂಘಟನೆ ಪುನರುಚ್ಚರಿಸಿದೆ.

ಬೃಹತ್ ಪ್ರಮಾಣದ ರೊಹಿಂಗ್ಯಾ ಮುಸ್ಲಿಮರ ವಲಸೆ ಮತ್ತು ಅದರ ಮಾನವೀಯ ಹಾಗೂ ಭದ್ರತಾ ಪರಿಣಾಮಗಳನ್ನು ನಿಭಾಯಿಸುವಲ್ಲಿ ನೆರವು ನೀಡುವ ಭರವಸೆಯನ್ನು ಇಸ್ಲಾಮಿಕ್ ದೇಶಗಳ ಸಂಘಟನೆ ನೀಡಿದೆ ಎಂದು ಬಾಂಗ್ಲಾದೇಶದ ವಿದೇಶ ಸಚಿವ ಎ.ಎಚ್. ಮಹ್ಮೂದ್ ಅಲಿ ತಿಳಿಸಿದರು.

ಭೀಕರ ದಮನ ಕಾರ್ಯಾಚರಣೆ

ಆಗಸ್ಟ್ ತಿಂಗಳ ಕೊನೆಯ ಭಾಗದಲ್ಲಿ ರೊಹಿಂಗ್ಯಾ ಬಂಡುಕೋರ ಗುಂಪೊಂದು ಮ್ಯಾನ್ಮಾರ್ ಸೇನೆ ಮತ್ತು ಪೊಲೀಸ್ ಹೊರಠಾಣೆಗಳ ಮೇಲೆ ದಾಳಿ ನಡೆಸಿ ಹಲವರನ್ನು ಕೊಂದ ಬಳಿಕ, ಇಡೀ ರೊಹಿಂಗ್ಯಾ ಸಮುದಾಯದ ವಿರುದ್ಧ ಮ್ಯಾನ್ಮಾರ್ ಸೇನೆಯು ಭೀಕರ ದಮನ ಕಾರ್ಯಾಚರಣೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ. ಸೇನಾ ದಮನ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ನಿಂದ ಹೊರಗಟ್ಟುವ ಯೋಜನೆಯ ಭಾಗವಾಗಿ ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು ಎಂದು ಹಲವು ಮಾನವಹಕ್ಕುಗಳ ಕಾರ್ಯಕರ್ತರು ಭಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News