ಬಿಜೆಪಿಯಿಂದ ಬೆಂಗಳೂರು ಚುನಾವಣಾ ಪ್ರಣಾಳಿಕೆ ಬಿಡುಗಡೆ

Update: 2018-05-08 12:52 GMT

ಬೆಂಗಳೂರು, ಮೇ 8: ಬೆಂಗಳೂರಿಗೆ ಪ್ರತ್ಯೇಕವಾದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಸುಗಮ ಆಡಳಿತಕ್ಕೆ ಸಹಕಾರಿಯಾಗುವಂತಹ ‘ನವ ಬೆಂಗಳೂರು ಕಾಯ್ದೆ’ಯನ್ನು ಜಾರಿಗೆ ತರಲಾಗುವುದೆಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.

ಮಂಗಳವಾರ ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ‘ನಮ್ಮ ಬೆಂಗಳೂರಿಗೆ ನಮ್ಮ ವಚನ’ ಎಂಬ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏಷ್ಯಾದಲ್ಲಿಯೆ ಬೆಂಗಳೂರು ಸಿಲಿಕಾನ್ ವ್ಯಾಲಿಯೆಂದು ಪ್ರಸಿದ್ಧಿಯಾಗಿದೆ. ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ಮಿನಿ ಭಾರತವಾಗಿ ರೂಪಗೊಂಡಿದೆ. ಈಗಾಗಿ ಬೆಂಗಳೂರಿಗೆ ಹೊಸ ರೀತಿಯ ಆಡಳಿತವನ್ನು ಜಾರಿ ಮಾಡುವ ನಿಟ್ಟಿನಲ್ಲಿ ನವ ಬೆಂಗಳೂರು ಕಾಯ್ದೆ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಈ ನೂತನ ಕಾಯ್ದೆಯಲ್ಲಿ ಎಲ್ಲ ಸರಕಾರಿ ಅಂಗಸಂಸ್ಥೆಗಳನ್ನು ಸಂಯೋಜಿಸುವುದು. ಬಿಬಿಎಂಪಿಯ ಗುತ್ತಿಗೆ ಸೇರಿದಂತೆ ಎಲ್ಲ ಆರ್ಥಿಕ ವ್ಯವಹಾರಗಳ ವಿವರ ಬಹಿರಂಗ ಕಡ್ಡಾಯಗೊಳಿಸುವುದು. ವಾರ್ಡ್ ಸಮಿತಿ ಹಾಗೂ ನಾಗರಿಕರಿಗೆ ಕಾನೂನಾತ್ಮಕ ಹಕ್ಕು ಒದಗಿಸುವುದು ಹಾಗೂ ವರ್ಷಕ್ಕೊಮ್ಮೆ ಬೆಂಗಳೂರಿನ ಸಾಧನೆಯ ವರದಿ ಪ್ರಕಟಿಸುವಂತಹ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಆಯುಶ್ಮಾನ್ ಬೆಂಗಳೂರು: ದೇಶದ ಎಲ್ಲ ಕುಟುಂಬಗಳಿಗೂ ಖಚಿತ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಪ್ರಧಾನಿ ಮೋದಿ ಜಾರಿಗೆ ತಂದಿರುವ ಆಯುಶ್ಮಾನ್ ಭಾರತ್ ಯೋಜನೆಯನ್ನು ನಗರದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ನಗರದಾದ್ಯಂತ ದಿನದ 24ಗಂಟೆಗಳು ಕಾರ್ಯನಿರ್ವಹಿಸುವ 28 ಸ್ಮಾರ್ಟ್ ಕ್ಲಿನಿಕ್‌ಗಳನ್ನು ಮತ್ತು 10 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸುವ ಮೂಲಕ ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಏರ್‌ಪೋರ್ಟ್ ಮೆಟ್ರೋ: ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು. ಮೆಟ್ರೋ ನೇರಳೆ ಮಾರ್ಗವನ್ನು ಕಾಡುಗೋಡಿಯ ಮೂಲಕ ಹೊಸಕೋಟೆ ಬಸ್ ನಿಲ್ದಾಣದವರೆಗೆ ಮತ್ತು ಇನ್ನೊಂದು ಭಾಗದಲ್ಲಿ ಕೆಂಗೇರಿ ಮೂಲಕ ಬಿಡದಿ ಬಸ್ ನಿಲ್ದಾಣದವರೆಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

ಉಪನಗರ ರೈಲು: ನಗರದಲ್ಲಿ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಬಿ-ರೈಡ್(ಬೆಂಗಳೂರು ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಪ್‌ಮೆಂಟ್ ಕಾರ್ಪೊರೇಶನ್) ಎಂಬ ವಿಶೇಷ ಸಂಸ್ಥೆ ಸ್ಥಾಪಿಸಲಾಗುವುದು. ನಗರದ ಜನತೆ ಒಂದೆ ಟಿಕೆಟ್ ಪಡೆದು ಆಟೋರಿಕ್ಷಾ, ಬಸ್, ಮೆಟ್ರೋ, ರೈಲು ಹಾಗೂ ಬಿ-ರೈಡ್ ಉಪನಗರ ರೈಲುಗಳ ಪೈಕಿ ಯಾವುದರಲ್ಲಿ ಬೇಕಾದರು ಪ್ರಯಾಣಿಸುವಂತಹ ಏಕೀಕೃತ ಸಾರಿಗೆ ವ್ಯವಸ್ಥೆ ಜಾರಿಗೆ ತರಲಾಗುವುದು. ಇದಕ್ಕೆ ಅನುಕೂಲವಾಗುವಂತೆ ಬೆಂಗಳೂರು ವೆುಟ್ರೋಪಾಲಿಟನ್ ಟ್ರಾನ್ಸಿಟಿ ಅಥಾರಿಟಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಈ ವೇಳೆ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಸಂಸದ ರಾಜೀವ್ ಚಂದ್ರಶೇಖರ್, ಶಾಸಕ ಅಶ್ವತ್ಥ್ ನಾರಾಯಣ, ಮತ್ತಿತರರಿದ್ದರು.

-ನಗರದಲ್ಲಿ ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆಗಾಗಿ ರಾಣಿ ಚೆನ್ನಮ್ಮ ಪಡೆ ಎಂಬ ವಿಶೇಷ ಮಹಿಳಾ ದಳವನ್ನು ಸ್ಥಾಪಿಸಲಾಗುವುದು.
-ಪ್ರತಿ ಕುಟುಂಬಕ್ಕೆ ವಾರ್ಷಿಕ 5ಲಕ್ಷ ರೂ. ಮೊತ್ತದ ವಿಮಾ ಸೌಲಭ್ಯ ದೊರಕಲಿದೆ.
-ಆಯುಶ್ಮಾನ್ ಹೆಲ್ತ್‌ಕೇರ್ ನೆಟ್‌ವರ್ಕ್‌ನಲ್ಲಿ ನೋಂದಾಯಿಸಿಕೊಂಡ ಫಲಾನುಭವಿಗಳು ನಿರ್ದಿಷ್ಟ ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆ ಪಡೆದುಕೊಳ್ಳಬಹುದು.
-ಪ್ರತಿ ವಾರ್ಡ್‌ನಲ್ಲಿ ಆಯುಶ್ಮಾನ್ ಕ್ಲಿನಿಕ್ ತೆರೆಯಲಾಗುವುದು.
-ಬೆಂಗಳೂರಿನಲ್ಲಿರುವ ಜನಸಂಖ್ಯೆಯಷ್ಟೆ ಮರಗಳನ್ನು ಬೆಳೆಸಲಾಗುವುದು.
-ಮಹಾನಗರ ಯೋಜನಾ ಸಮಿತಿ ರಚಿಸಲಾಗುವುದು.
-ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯವನ್ನು ಬಲಪಡಿಸಲಾಗುವುದು.
-ಜನವಸತಿಗೆಂದು ಮೀಸಲಾದ ಪ್ರದೇಶಗಳಲ್ಲಿ ಶಬ್ದ, ತ್ಯಾಜ್ಯ ಮತ್ತಿತರೆ ಮಾಲಿನ್ಯ ಉಂಟುಮಾಡುವಂತಹ ಕೈಗಾರಕೆಗಳನ್ನು ನಿರ್ಬಂಧಿಸಲಾಗುವುದು.
-ಬೆಂಗಳೂರಿನ ನಗರದ ಎಲ್ಲ ಬಡವರಿಗೂ ಕೆಂಪೇಗೌಡ ವಸತಿ ಯೋಜನೆಯಡಿ ವಸತಿಗಳನ್ನು ನಿರ್ಮಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News