ನೋಟು ರದ್ದತಿ ಕುರಿತ ಮಾಹಿತಿ ನಿರಾಕರಿಸಿದ್ದು ತಪ್ಪಲ್ಲ: ಮಾಥುರ್

Update: 2018-05-08 18:49 GMT

ಹೊಸದಿಲ್ಲಿ, ಮೇ 8: ನೋಟು ರದ್ದತಿಯ ಬಳಿಕದ ಅವಧಿಯಲ್ಲಿ ಮುದ್ರಿಸಿರುವ ಕರೆನ್ಸಿ ನೋಟುಗಳ ಬಗ್ಗೆ ಮಾಹಿತಿ ನೀಡಲು ಪ್ರಧಾನಿ ಮಂತ್ರಿಯವರ ಕಚೇರಿ (ಪಿಎಂಒ) ನಿರಾಕರಿಸಿರುವ ಕ್ರಮ ಸರಿ ಎಂದು ಪ್ರಧಾನ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ತಿಳಿಸಿದ್ದಾರೆ.

ನೋಟು ರದ್ದತಿಯ ಬಳಿಕದ ಅವಧಿಯಲ್ಲಿ ಎಷ್ಟು ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿದೆ ಎಂಬ ವಿವರ ಒದಗಿಸುವಂತೆ ಕೋರಿ 2016ರ ನವೆಂಬರ್ 15ರಂದು ಆರ್.ಎಲ್. ಕೈನ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪಿಎಂಒ, ಈ ವಿಷಯವು ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿರುವ ಕಾರಣ ಈ ಮಾಹಿತಿ ನೀಡಲಾಗದು ಎಂದು ತಿಳಿಸಿತ್ತು.

 ಕೈನ್ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿರುವಂತೆ- 2016ರ ನವೆಂಬರ್‌ನಲ್ಲಿ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಳೆದ ಸುಮಾರು 6 ತಿಂಗಳುಗಳಿಂದ ಹೊಸ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸುವ ಕಾರ್ಯ ಸಾಗುತ್ತಿದೆ ಎಂದು ತಿಳಿಸಿದ್ದರು. ಹಾಗಿರುವಾಗ ನವೆಂಬರ್ 8ರಂದು ಸಂಜೆ 6:00 ಗಂಟೆಗೆ ಆರ್‌ಬಿಐ ಪ್ರಸ್ತಾವನೆ ಸಲ್ಲಿಕೆಯಾಗಿ, 7:00 ಗಂಟೆಗೆ ಸಂಪುಟದಲ್ಲಿ ಅನುಮೋದನೆಗೊಂಡು ಅದೇ ದಿನ 8:00 ಗಂಟೆಗೆ ನೋಟುಗಳನ್ನು ಅಮಾನ್ಯಗೊಳಿಸಲು ಕ್ರಮ ಕೈಗೊಳ್ಳಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ಆರು ಸರಕಾರಿ ಮುದ್ರಣಾಲಯಗಳಲ್ಲಿ ಕಳೆದ ಕೆಲವು ತಿಂಗಳಿಂದ ನೋಟು ಮದ್ರಿಸುವ ಕಾರ್ಯ ಸಾಗುತ್ತಿದೆ ಎಂದು ತಿಳಿಸಿದ್ದರು. ಈ ವಿಷಯದಲ್ಲಿ ಪ್ರಧಾನಿ ಹಾಗೂ ವಿತ್ತಸಚಿವರ ಹೇಳಿಕೆಯಲ್ಲಿ ಭಿನ್ನತೆಯಿರುವುದನ್ನು ಕಾಣಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆರ್‌ಬಿಐ ಕಾಯ್ದೆ 1934ರ ಸೆಕ್ಷನ್ 24ರ ಪ್ರಕಾರ 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳೇ ಇಲ್ಲ. ಯಾವುದೇ ಹೊಸ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸುವ ಮೊದಲು ಈ ಕಾಯ್ದೆಗೆ ಸಂಸತ್ತಿನಲ್ಲಿ ತಿದ್ದುಪಡಿಯಾಗಬೇಕು. ಆದರೆ 2,000 ರೂ. ಮುಖಬೆಲೆಯ ನೋಟುಗಳನ್ನು ಯಾವುದೇ ತಿದ್ದುಪಡಿ ಮಾಡದೆ, ದಿಢೀರನೆ ಮುದ್ರಿಸುವ ಕಾರ್ಯ ಆರಂಭವಾಗಿದೆ. ಆದ್ದರಿಂದ 2,000 ರೂ. ಮುಖಬೆಲೆಯ ನೋಟುಗಳು ಕೋಟಾ ನೋಟುಗಳಾಗಿವೆ ಎಂದು ಕೈನ್ ತಿಳಿಸಿದ್ದರು.

ಮಾಹಿತಿ ನಿರಾಕರಿಸಿರುವ ಮೂಲಕ ತಪ್ಪೆಸಗಿರುವ ಪ್ರಧಾನ ಮಂತ್ರಿ ಕಚೇರಿಗೆ ದಂಡ ವಿಧಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಚಿವ ಸಮಿತಿಯಲ್ಲಿ ಕೈಗೊಳ್ಳಲಾಗುವ ಎಲ್ಲಾ ನಿರ್ಧಾರಗಳನ್ನೂ ರಾಷ್ಟ್ರಪತಿಗಳಿಗೆ ಸರಕಾರ ಕಡ್ಡಾಯವಾಗಿ ತಿಳಿಸಬೇಕು. ಆದ್ದರಿಂದ ಮಾಹಿತಿಯನ್ನು ನಿರಾಕರಿಸಲು ಪ್ರಧಾನ ಮಾಹಿತಿ ಆಯುಕ್ತರಿಗೆ ಯಾವುದೇ ಸ್ಥಾನಾಧಿಕಾರವಿಲ್ಲ ಎಂದು ಅರ್ಜಿದಾರರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News