ಗುರುತಿನ ಚೀಟಿ ಪತ್ತೆ ವೇಳೆ ಹಲ್ಲೆ: ಬಿಬಿಎಂಪಿ ಕಾರ್ಪೋರೇಟರ್ ಸೇರಿ ಇಬ್ಬರ ಬಂಧನ
ಬೆಂಗಳೂರು, ಮೇ 9: ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗುರುತಿನ ಚೀಟಿಗಳು ಪತ್ತೆಯ ವೇಳೆ ಕೆಲವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಬಿಎಂಪಿ ಸದಸ್ಯ ಜಿ.ಕೆ.ವೆಂಕಟೇಶ್ ಸೇರಿ ಇಬ್ಬರನ್ನು ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್‌ವ್ಯೆ ಅಪಾರ್ಟ್‌ಮೆಂಟ್‌ನಲ್ಲಿ 9,746 ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟ ಪ್ರಕರಣ ಬೆಳಕಿಗೆ ಬಂದಾಗ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದ ವೇಳೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಬಿಎಂಪಿ ಯಶವಂತಪುರ ವಾರ್ಡ್ ಕಾಂಗ್ರೆಸ್ ಸದಸ್ಯ ಜಿ.ಕೆ ವೆಂಕಟೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಘು ಎಂಬಾತನನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದರು.
ಪ್ರಿಂಟರ್ ವಶಕ್ಕೆ: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ 9,746 ಸಾವಿರ ಮತದಾರರ ಗುರುತಿನ ಚೀಟಿಗಳ ಕುರಿತು ತನಿಖೆ ಮುಂದುವರೆಸಲಾಗಿದ್ದು, ಫ್ಲಾಟ್ ನಂ.115ರಲ್ಲಿ ಸಂಗ್ರಹಿಸಲಾಗಿದ್ದ ಪ್ರಿಂಟರ್‌ಗಳನ್ನು ಬುಧವಾರ ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾಲಕನ ಹುಡುಕಾಟ: ರಂಗರಾಜು ಅವರಿಗೆ ಫ್ಲಾಟ್ ಬಾಡಿಗೆ ನೀಡಲಾಗಿದ್ದು, ಅವರೇ ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಿದ್ದಾರೆ ಎಂದು ಫ್ಲಾಟ್ ಮಾಲಕರಾದ ಬಿಜೆಪಿ ಬಿಬಿಎಂಪಿ ಮಾಜಿ ಸದಸ್ಯೆ ಎನ್ನಲಾದ ಮಂಜುಳಾ ನಂಜಾಮರಿ ಅವರ ಪುತ್ರ ಶ್ರೀಧರ್ ನಂಜಾಮರಿ ಹೇಳಿದ್ದಾಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದ್ದ ಬೆನ್ನಲ್ಲೇ ತನಿಖಾಧಿಕಾರಿಗಳು ಫ್ಲಾಟ್ ಮಾಲಕನ ಹುಡುಕಾಟ ನಡೆಸುತ್ತಿದ್ದಾರೆ.
ರಾಕೇಶ್ ಸಂಬಂಧವಿಲ್ಲ: ಗುರುತಿನ ಚೀಟಿಗಳು ಪತ್ತೆಯಾಗಿದ್ದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಫ್ಲಾಟ್ ಮಾಲಕಳಾದ ಮಂಜುಳಾ ನಂಜಾಮರಿ ಹಾಗೂ ಬಿಜೆಪಿಯ ರಾಕೇಶ್ ಪ್ರಕರಣದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಉತ್ತರಿಸಿರುವ ಮಂಜುಳಾ ನಂಜಾಮರಿ, ರಾಕೇಶ್ ನನ್ನ ಗಂಡನ ಅಣ್ಣನ ಮಗ. ನಾನೀಗ ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಆದರೆ ಬಿಜೆಪಿಗೆ ಮತ ನೀಡುತ್ತೇನೆ ಎಂದಿದ್ದಾರೆ.
ಸಭೆ: ಬುಧವಾರ ಸಭೆ ನಡೆಸಿದ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್, ಚುನಾವಣಾ ವೀಕ್ಷಕರು, ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರು ಮಹತ್ವದ ಸಭೆ ನಡೆಸಿದ್ದು, ಪ್ರಕರಣದ ಕುರಿತು ಈಗಾಗಲೇ ಪ್ರಾಥಮಿಕ ವರದಿಯನ್ನು ಕೂಡಾ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.