ಚುನಾವಣೆ ಮುಂದೂಡಲು ಜೆಡಿಎಸ್‌ನಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು

Update: 2018-05-09 13:32 GMT

ಬೆಂಗಳೂರು, ಮೇ 9: ರಾಜ ರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಚುನಾವಣಾ ಗುರುತಿನ ಚೀಟಿ ಸಂಗ್ರಹಣೆ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕೆಂದು ಜೆಡಿಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಜೆಡಿಎಸ್ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಪಕ್ಷದ ಪರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಬುಧವಾರ ಪತ್ರ ಬರೆದಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಅಕ್ರಮ ಗುರುತಿನ ಚೀಟಿ ಸಂಗ್ರಹಣೆ ಪತ್ತೆಯಾಗಿದೆ. ಹೀಗಾಗಿ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯಬೇಕಾದರೆ ಚುನಾವಣೆಯನ್ನು ಮುಂದೂಡಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ 1996ರ ಥೇನ್‌ಸಿಂಗ್ ಪ್ರಕರಣದಲ್ಲಿ ಚುನಾವಣಾ ಅಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಅದೇ ಮಾದರಿಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕೆಂದು ರಮೇಶ್ ಬಾಬು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News