ಬೆಂಗಳೂರು: ಆದಿತ್ಯನಾಥ್ ಪ್ರಚಾರ ಸಭೆಯಲ್ಲಿ ಖಾಲಿ ಖಾಲಿ ಕುರ್ಚಿಗಳು

Update: 2018-05-09 14:36 GMT

ಬೆಂಗಳೂರು, ಮೇ 9: ಆನೇಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಆಗಮಿಸಿದ್ದ ಉತ್ತರ ಪ್ರದೇಶ  ಮುಖ್ಯಮಂತ್ರಿ ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಜನರಿಲ್ಲದೇ ಇದ್ದುದರಿಂದ ಅರ್ಧ ಗಂಟೆಯಲ್ಲೇ ವಾಪಸ್ ತೆರಳಿದ ಬಗ್ಗೆ ವರದಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪ್ರಚಾರ ಕಾರ್ಯಕ್ರಮ ನಡೆದಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪರ ಆದಿತ್ಯನಾಥ್ ಮತ ಯಾಚನೆಗೆ ಬಂದಿದ್ದರು. 4000 ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, 1 ಸಾವಿರ ಕುರ್ಚಿಗಳು ಸಹ ತುಂಬಿರಲಿಲ್ಲ ಎನ್ನಲಾಗಿದೆ. ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಆದಿತ್ಯನಾಥ್ ಆಗಮಿಸಿದ್ದರೂ ಜನರಿಲ್ಲದೆ ಇದ್ದುದರಿಂದ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವುಂಟಾಯಿತು. ಜನರಿಲ್ಲದ ಕಾರಣ ಆದಿತ್ಯನಾಥ್ ಕೇವಲ ಅರ್ಧ ಗಂಟೆಯಲ್ಲೇ ಕಾರ್ಯಕ್ರಮ ಮುಗಿಸಿ ವಾಪಸ್ಸಾದರು ಎನ್ನಲಾಗಿದೆ. 

ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ್ದ ಆದಿತ್ಯನಾಥ್ ಗೆ ಪೂರ್ಣ ಕುಂಭ ಕಳಶದೊಂದಿಗೆ ಮಹಿಳಾ ಕಾರ್ಯಕರ್ತೆಯರು ಸ್ವಾಗತ ಕೋರಿದರು. ಈ ಸಂದರ್ಭ ಮಾತನಾಡಿದ ಆದಿತ್ಯನಾಥ್, ಕರ್ನಾಟಕ ಸರ್ಕಾರದ  ಹಿಂದೂ ವಿರೋಧಿ ನೀತಿಯಿಂದ ಸಂಘ ಪರಿವಾರದ 24 ಕಾರ್ಯಕರ್ತರ ಹತ್ಯೆಗಳಾಗಿವೆ. ರಾಜಕೀಯ ಪ್ರೇರಿತ ಹತ್ಯೆಗಳಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ಬೆಂಗಳೂರು ಒಂದು ಕಾಲದಲ್ಲಿ ಜ್ಞಾನದ ಕಾಶಿಯಾಗಿತ್ತು. ಇಂದು ಅದು ಕುಖ್ಯಾತಿಗೆ ಒಳಗಾಗಿದೆ. ಎಲ್ಲಾ ಮಾಫಿಯಾಗಳಿಗೆ ಕರ್ನಾಟಕವೇ ನೆಲೆಯಾಗಿದೆ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಕರ್ನಾಟಕ ಮರಳು, ಮರ ಲೂಟಿ ಮಾಡುವ ತಾಣವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News