‘ಒಗ್ಗಟ್ಟು’ ತೋರಲು ರಾಹುಲ್ ಗಾಂಧಿ ಸುದ್ದಿಗೋಷ್ಠಿ: ಪಿಯೂಷ್ ಗೋಯಲ್

Update: 2018-05-10 12:28 GMT

ಬೆಂಗಳೂರು, ಮೇ 10: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕಾಟಾಚಾರಕ್ಕೆ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿದೆ ಎಂದು ತೋರಿಸುವ ಸಲುವಾಗಿ ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟೀಕಿಸಿದ್ದಾರೆ.

ಗುರುವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ರಾಹುಲ್ ಗಾಂಧಿ ಉತ್ತರ ನೀಡಲಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ, ಕಾನೂನು ಸುವ್ಯವಸ್ಥೆ ಬಗ್ಗೆ ರಾಹುಲ್ ಯಾವುದೇ ಭರವಸೆ ನೀಡಲು ಹಿಂದೇಟು ಹಾಕಿದ್ದಾರೆ. ಹೇಳಿದ್ದನ್ನೇ ಹೇಳಿ ರಾಜ್ಯದ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ, ಜವಾಬ್ದಾರಿಯಿಲ್ಲದೆ ಮಾತನಾಡಿದ್ದಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಹೇಳಿಕೆಗಳು ಇತ್ತೀಚೆಗೆ ಆಶ್ಚರ್ಯವನ್ನುಂಟು ಮಾಡುತ್ತಿವೆ. ಮಹದಾಯಿ ಬಗ್ಗೆ ರಾಹುಲ್ ಮಾತಾಡುತ್ತಿಲ್ಲ. ಗೋವಾದಲ್ಲೇ ಅವರ ಕಾಂಗ್ರೆಸ್ ನಾಯಕರು, ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದರು. ಬಾದಾಮಿಯಲ್ಲಿನ ಐಟಿ ರೈಡ್ ಬಗ್ಗೆ ರಾಹುಲ್ ಮಾತನಾಡುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹತ್ತಿರ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರದ ಆಡಳಿತದಿಂದ ರಾಜ್ಯ ಐದು ವರ್ಷ ಬಳಲಿದೆ. ರಾಜ್ಯ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಉತ್ತರವಿಲ್ಲ. ಬೆಂಗಳೂರು ನಗರದ ಬಗ್ಗೆ ಕೂಡ ಅವರ ಬಳಿ ಸ್ಪಷ್ಟ ಪರಿಕಲ್ಪನೆ ಇಲ್ಲ. ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಟೀಕಿಸಿದರು.

ಇಂದು ಕಾಟಾಚಾರಕ್ಕೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿಲ್ಲ. ಆದರೆ ಅದನ್ನು ಮುಚ್ಚಿಹಾಕಿ ಒಗ್ಗಟ್ಟು ಪ್ರದರ್ಶಿಸಲು ಇಂದು ಎಲ್ಲ ನಾಯಕರೊಂದಿಗೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದಾರೆ ಅಷ್ಟೇ ಎಂದು ರಾಹುಲ್ ಸುದ್ದಿಗೋಷ್ಠಿಯನ್ನು ಪಿಯೂಷ್ ಗೋಯಲ್ ಟೀಕಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ, ಮಂಜುಳಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News