ಬೆಂಗಳೂರು: ಸಮೂಹ ಕಲಾಕೃತಿ ಪ್ರದರ್ಶನಕ್ಕೆ ಚಾಲನೆ

Update: 2018-05-10 14:33 GMT

ಬೆಂಗಳೂರು, ಮೇ 10: ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ವಿ6 ಇಂಡಿಯಾ ತಂಡ ಹಮ್ಮಿಕೊಂಡಿರುವ ಸಮೂಹ ಕಲಾಕೃತಿ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಗುರುವಾರ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದ್ದ ಲೋಕಾಯುಕ್ತವನ್ನು ರಾಜ್ಯ ಸರಕಾರ ಮೂಲೆಗುಂಪು ಮಾಡಿತು. ಆದರೆ, ಇದೀಗ ಅಧಿಕಾರ ಕೊಟ್ಟರೆ ಲೋಕಾಯುಕ್ತ ಬಲಿಷ್ಠಗೊಳಿಸುತ್ತೇವೆ ಎನ್ನುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು, ಎಸಿಬಿ ಸೃಷ್ಟಿಸುವ ಮೂಲಕ ರಾಜಕಾರಣಿಗಳಿಗೆ ಸರಕಾರದಿಂದಲೇ ಶ್ರೀರಕ್ಷೆ ಒದಗಿಸಲಾಯಿತು. ಅಷ್ಟಕ್ಕೂ ಸಮಾಜದ ವ್ಯವಸ್ಥೆ ಸುಧಾರಿಸಬೇಕಾದರೆ ಯುವಸಮುದಾಯ ಮುಂಚೂಣಿಗೆ ಬರಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ, ಜಾತಿ ನೋಡಿ ಮತಹಾಕಬೇಡಿ. ಬದಲಾಗಿ ಅಭ್ಯರ್ಥಿಯನ್ನು ನೋಡಿ ಮತಚಲಾಯಿಸಿ. ಒಂದು ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಸೂಕ್ತವೆನಿಸದಿದ್ದಲ್ಲಿ ನೋಟಾಕ್ಕೆ ಮತಹಾಕಿ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಬದಲಾವಣೆ ತರಬಹುದು ಎಂದು ನಿವೃತ್ತ ಲೋಕಾಯುಕ್ತ ಸಂತೆಷ್ ಹೆಗ್ಡೆ ಸಲಹೆ ನೀಡಿದರು.

ಕಣ್ಮನ ಸೆಳೆದ ಸಮೂಹ ಕಲಾಕೃತಿ: ಪ್ರದರ್ಶನದಲ್ಲಿ ಬಾಲ್ಯದ ಅವಿಸ್ಮರಣೀಯ ಕ್ಷಣಗಳು, ಸಮಾಜ ಮಹಿಳೆಯರನ್ನು ನಡೆಸಿಕೊಳ್ಳುವ ಪರಿ, ಬನಾರಸ್‌ನ ಸುಂದರ ಪರಿಸರ ಹೀಗೆ ವಿವಿಧ ವಿಷಯದ ಮೇಲೆ ದೇಶದ 7ಮಂದಿ ಕಲಾವಿದರು ತಮ್ಮ ಕಲ್ಪನೆಗೆ ಬಣ್ಣ ತುಂಬುವ ಮೂಲಕ ಕಲಾಕೃತಿಗೆ ಜೀವ ತುಂಬಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಪಿ.ಸಂಪತ್‌ಕುಮಾರ್, ಶಿವಾನಂದ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News