ಶಾಸಕ ಮುನಿರತ್ನ ಸೇರಿ 14 ಜನರ ವಿರುದ್ಧ ಎಫ್‌ಐಆರ್

Update: 2018-05-10 13:00 GMT

ಬೆಂಗಳೂರು, ಮೇ 10: ನಗರದ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದ ಪ್ರಕರಣ ಸಂಬಂಧ ಆರ್‌ಆರ್ ನಗರದ ಶಾಸಕ ಮುನಿರತ್ನ ಸೇರಿ 14 ಜನರ ವಿರುದ್ಧ ಇಲ್ಲಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಬಿಬಿಎಂಪಿ ಮಾಜಿ ಬಿಜೆಪಿ ಸದಸ್ಯ ಮಂಜುಳಾ ನಂಜಾಮರಿ, ಮಂಜುನಾಥ್ ಸೇರಿದಂತೆ ಹಲವಾರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಶಾಸಕ ಮುನಿರತ್ನ 14ನೆ ಆರೋಪಿ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾಧಿಕಾರಿಗಳು ದಾಳಿ ನಡೆಸಿದ ವೇಳೆ ಸಾವಿರಾರು ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಜತೆಗೆ ಸ್ಥಳದಲ್ಲಿ ಸ್ಥಳೀಯ ಶಾಸಕ ಮುನಿರತ್ನ ಅವರ ಭಾವಚಿತ್ರ ಇರುವ ಕೆಲ ಕರಪತ್ರಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ನೀಡಿದ್ದ ದೂರಿನ ಆಧಾರದ ಮೇಲೆ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸರು ಯಶವಂತಪುರ ಕಾಂಗ್ರೆಸ್ ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್ ಮತ್ತು ರಘು ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಗಲಾಟೆ ಪ್ರಕರಣದಲ್ಲಿ ಏಳಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಐಪಿಸಿ ಸೆಕ್ಷನ್ 120 ಬಿ, 171 ಇ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ಮುನಿರತ್ನ ಸ್ಪಷ್ಟನೆ
ಜಾಲಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ಮತದಾನದ ಗುರುತಿನ ಚೀಟಿ ಪತ್ತೆಯಾದ ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಇದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆರ್‌ಆರ್ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಎಲ್ವಿ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವುದರಲ್ಲಿ ಬಿಜೆಪಿ ಕೈವಾಡವಿದೆ. ನನ್ನ ಭಾವಚಿತ್ರವಿರುವ ಕರಪತ್ರಗಳನ್ನು ಅಲ್ಲಿ ಇದ್ದುದ್ದಕ್ಕೆ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಾನು ಸುಮಾರು 40 ಸಾವಿರ ಕರಪತ್ರಗಳನ್ನು ಆಯೋಗದ ಅನುಮತಿ ಪಡೆದು ಹಂಚಿದ್ದೇನೆ. ಪ್ರತಿ ಮನೆಯಲ್ಲೂ ನನ್ನ ಕರಪತ್ರಗಳಿವೆ. ನನ್ನ ಫೋಟೋ ಇರುವ ನೀರಿನ ಬಾಟಲು ಮತ್ತು ಕರಪತ್ರ ಇದೆ ಎಂದು ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ನನಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅಪಾರ್ಟ್‌ಮೆಂಟ್‌ಗೆ ಬಿಜೆಪಿ ಕಾರ್ಯಕರ್ತರು ಬಂದು ನೋಡಿದಾಗ ಕೂಗಳತೆಯಲ್ಲಿರುವ ಪೊಲೀಸ್ ಠಾಣೆಗೆ ಏಕೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಪೊಲೀಸರು ಬರುವ ಮುಂಚೆಯೇ ಇವರು ವಿಡಿಯೋ ಮಾಡುವುದರ ಅಗತ್ಯವೇನಿತ್ತು? ಸಿಕ್ಕಿರುವ ಮತದಾರರ ಗುರುತಿನ ಚೀಟಿಗಳೆಲ್ಲಾ ಸ್ಥಳೀಯ ನಿವಾಸಿಗಳದ್ದು, ಇವುಗಳನ್ನು ಪಡೆಯುವ ಅಗತ್ಯ ನಮಗೆ ಇಲ್ಲ. ಇದೆಲ್ಲ ಬಿಜೆಪಿಯವರ ಕೈವಾಡ. ಅಲ್ಲದೆ, ಈ ಹಿಂದೆ ಹೆಬ್ಬಾಳ ಕ್ಷೇತ್ರದಲ್ಲೂ ಇದೇ ರೀತಿ ಬಿಜೆಪಿಯವರು ಮಾಡಿದ್ದರು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News