ಮೋದಿ ಭಾಷಣ ‘ಕಾಮಿಡಿ ಶೋ’ ಇದ್ದಂತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-05-10 13:23 GMT

ಬೆಂಗಳೂರು, ಮೇ 10: ಪ್ರಧಾನಿ ಮೋದಿಯವರ ಭಾಷಣಗಳಿಂದ ಪ್ರಧಾನಿ ಹುದ್ದೆಯ ಘನತೆ ಕಡಿಮೆಯಾಗಿದ್ದು, ಒಂದು ರೀತಿಯಲ್ಲಿ ಕಾಮಿಡಿ ಶೋನಂತೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಂವಿಧಾನಬದ್ಧ ಎಲ್ಲ ಹುದ್ದೆಗಳ ಬಗ್ಗೆಯೂ ಅಪಾರ ಗೌರವವಿದೆ. ಆದರೆ, ಪ್ರಧಾನಿ ಮೋದಿ ಆಡಿದ ಮಾತುಗಳು ಆ ಹುದ್ದೆಯ ಘನತೆಗೆ ತಕ್ಕುದಾದುದ್ದಲ್ಲ ಎಂದರು.

ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಸಂದರ್ಭದಲ್ಲಿ ಮೋದಿ ವಿರುದ್ಧ ಕಠಿಣ ಶಬ್ದಗಳಲ್ಲೆ ಪ್ರತಿಕ್ರಿಯೆ ನೀಡಿದ್ದೇನೆ. ಹಾಗೆಂದ ಮಾತ್ರಕ್ಕೆ ಯಾರನ್ನೂ ತಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದ ಅವರು, ಇವೆಲ್ಲವನ್ನು ಜನತೆ ಗಮನಿಸುತ್ತಿದ್ದು, ಸುಳ್ಳು ಆರೋಪಗಳನ್ನು ರಾಜ್ಯದ ಜನತೆ ಪರಿಗಣಿಸುವುದಿಲ್ಲ ಎಂದರು.

ನಮ್ಮ ಸರಕಾರ ಯಾವುದೇ ಜಾತಿ, ಧರ್ಮವನ್ನು ಗುರಿಯಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸಿಲ್ಲ. ಎಲ್ಲ ಜನಾಂಗವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿದೆ. ರಾಜ್ಯದಲ್ಲಿ ಎಲ್ಲಿಯೂ ಆಡಳಿತ ವಿರೋಧಿ ಅಲೆ ಇಲ್ಲ. ಜನ ನಮ್ಮ ಪರವಾಗಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ನಾವು ಈ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆ.ರೆಹ್ಮಾನ್ ಖಾನ್, ಬಿ.ಕೆ.ಹರಿಪ್ರಸಾದ್, ರಣದೀಪ್ ಸಿಂಗ್ ಸುರ್ಜೆವಾಲಾ ಹಾಜರಿದ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಂದೇ ವೇದಿಕೆಯಲ್ಲಿ ಕೂರುವುದಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಎಲ್ಲ ಮುಖಂಡರು ಒಗ್ಗಟ್ಟಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ವಿಶೇಷವಾಗಿತ್ತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News