ಕಾಂಗ್ರೆಸ್ ಸರಕಾರ ಜಾತಿ-ಧರ್ಮಗಳನ್ನು ವಿಭಜಿಸಿಲ್ಲ: ಮಾತೆ ಮಹಾದೇವಿ

Update: 2018-05-10 14:18 GMT

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ‘ರಾಜ್ಯ ಕಾಂಗ್ರೆಸ್ ಸರಕಾರ ಜಾತಿಗಳ ವಿಭಜನೆ ಮಾಡಿದೆ, ಅದಕ್ಕೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಕರೆ ನೀಡಿದ್ದಾರೆ’. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಳನ್ನು ಒಡೆಯುವ ಬದಲಿಗೆ, ಒಂದುಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿಗೆ ಸುಳ್ಳು ಮಾಹಿತಿ ರವಾನೆ ಮಾಡಿದ್ದಾರೆ. ವಾಸ್ತವವಾಗಿ ಯಾವುದೇ ಜಾತಿ, ಧರ್ಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆಯಲು ಯತ್ನಿಸಿಲ್ಲ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಮೂಲಕ ಹಲವು ಒಳಪಂಗಡಗಳನ್ನು ಒಂದು ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ವೈದಿಕ ಹಿಂದೂ ಧರ್ಮಕ್ಕಾಗಿ ಆರೆಸ್ಸೆಸ್ ರ್ಯಾಲಿಗಳಲ್ಲಿ ಭಾಗವಹಿಸುತ್ತಾರೆ. ಸಭೆಗಳಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡುತ್ತಾರೆ. ಇವೆಲ್ಲವೂ ಮೋದಿ ದೃಷ್ಟಿಯಲ್ಲಿ ತಪ್ಪಲ್ಲ. ಆದರೆ, ರಾಜ್ಯ ಸಚಿವರು ತಾವು ಹುಟ್ಟಿದ ಧರ್ಮಕ್ಕಾಗಿ ಬಹಿರಂಗವಾಗಿ ಕೆಲಸ ಮಾಡಿದರೆ ಅಪರಾಧವಾ? ಎಂದು ಅವರು ಪ್ರಶ್ನಿಸಿದರು.

ವಿಜಯಪುರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪರೋಕ್ಷವಾಗಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವುದಿಲ್ಲ ಎಂದಿದ್ದಾರೆ. ಆದರೆ, ಲಿಂಗಾಯತರು ಎಂದಿಗೂ ಸ್ವತಂತ್ರರೆ. ಅದನ್ನು ಪಡೆದುಕೊಳ್ಳುವುದು ನಮ್ಮ ಹಕ್ಕು ಎಂದ ಅವರು, ಚುನಾವಣೆ ನಡೆಯುತ್ತಿರುವುದು ರಾಜ್ಯದ ವಿಧಾನಸಭೆಗೆ, ಆಡಳಿತ ನಡೆಸಬೇಕಾದವರು ರಾಜ್ಯದ ನಾಯಕರು. ಆದರೆ, ಮೋದಿ ವರ್ಚಸ್ಸನ್ನು ತೋರಿಸಿ ಬಿಜೆಪಿಯನ್ನು ಗೆಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಮಾತೆ ಮಹಾದೇವಿ ವ್ಯಂಗ್ಯವಾಡಿದರು.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಲಿಂಗಾಯತ ಸಮುದಾಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 10 ಜನ ಲಿಂಗಾಯತ ಸಂಸದರಿದ್ದಾರೆ. ಆದರೆ, ಯಾರನ್ನೂ ಸಚಿವರನ್ನಾಗಿ ಮಾಡಲಿಲ್ಲ. ಜೀವನ ಪರ್ಯಂತ ಬಿಜೆಪಿ ಮತ್ತು ಆರೆಸ್ಸೆಸ್‌ಗಾಗಿ ದುಡಿದ ಯಡಿಯೂರಪ್ಪ ಮಗನಿಗೆ ಟಿಕೆಟ್ ನೀಡದೇ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಯಡಿಯೂರಪ್ಪ ಅದನ್ನು ಅನಿವಾರ್ಯವಾಗಿ ಸಹಿಸಿಕೊಂಡಿದ್ದಾರೆ. ಆದರೆ, ಲಿಂಗಾಯತ ಸಮುದಾಯ ಸಹಿಸುವುದಿಲ್ಲ ಎಂದರು.

ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಮಹದಾಯಿ ಯೋಜನೆಯ ಪ್ರಸ್ತಾಪವೇ ಇಲ್ಲ. ಬಿಜೆಪಿ ಗೆದ್ದರೆ ಮಹದಾಯಿ ಯೋಜನೆಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಪ್ರಧಾನಿ ಕೈಯಲ್ಲಿ ಅಧಿಕಾರವಿದ್ದರೂ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಂಧಾನ ಮಾಡಲಿಲ್ಲ. ಈ ರೀತಿಯ ಆಮಿಷಗಳನ್ನೊಡ್ಡಿ ಮತ ಕೇಳುವುದು ಪ್ರಧಾನಿ ಸ್ಥಾನಕ್ಕೆ ಅಗೌರವ ಮಾಡಿದ್ದಾರೆ ಎಂದು ಅವರು ದೂರಿದರು.

ದಿಂಗಾಲೇಶ್ವರ ಸ್ವಾಮಿಗಳು ‘ಮಾತೆ ಮಹಾದೇವಿಗೆ ರಾಜಕಾರಣದ ಹುಚ್ಚು ಹಿಡಿದಿದ್ದರೆ ನೇರವಾಗಿ ಅಧಿಕೃತ ಪಕ್ಷದ ಸದಸ್ಯತ್ವ ಪಡೆದು, ಕಾವಿ, ಮಠ ಬಿಟ್ಟು ಪ್ರಚಾರ ಮಾಡಲಿ’ ಎಂದಿದ್ದಾರೆ. ಆದರೆ, ನನಗೆ ಧರ್ಮದ ಪ್ರಚಾರ ಹುಚ್ಚು ಹಿಡಿದಿದೆ ವಿನಾ ಯಾವುದೇ ರಾಜಕಾರಣದ್ದಲ್ಲ. ಅಲ್ಲದೆ, ರಾಜಕಾರಣ ಮಾಡಲು ಕಾವಿ ತ್ಯಜಿಸಬೇಕಾದ ಅಗತ್ಯವಿಲ್ಲ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದರೂ ಕಾವಿ ಹಾಗೂ ಮಠ ತ್ಯಜಿಸಿಲ್ಲ. ಎಷ್ಟೋ ಸನ್ಯಾಸಿಗಳು ಲೋಕಸಭೆಯಲ್ಲಿದ್ದಾರೆ ಎಂದು ಮಾತೆ ಮಹಾದೇವಿ ತಿರುಗೇಟು ನೀಡಿದರು.

ಪಂಚಪೀಠಾಧೀಶರಲ್ಲಿ ಕೆಲವರು ಮತ್ತು ಸ್ಥಳೀಯ ಪುರೋಹಿತರು ತಮ್ಮ ಸ್ಥಾನವನ್ನು ಮರೆತು ಬಬಲೇಶ್ವರ ಕ್ಷೇತ್ರದ ಮನೆ ಮನೆಗಳಿಗೆ ತೆರಳಿ ಪಾದ ಮುಟ್ಟಿಸಿ, ಎಂ.ಬಿ.ಪಾಟೀಲ್‌ಗೆ ಮತ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಬಹಳ ಕೆಳಮಟ್ಟದ ವರ್ತನೆ. ಭಕ್ತರ ಶ್ರದ್ಧೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಖಂಡನೀಯ.

-ಮಾತೆ ಮಹಾದೇವಿ, ಬಸವ ಧರ್ಮ ಪೀಠಾಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News