ಕಾಂಗ್ರೆಸ್ ಗೆಲ್ಲಿಸಲು ದ್ರಾವಿಡ ಹಿಂದೂ ಮಹಾಸಭಾ ಕರೆ
ಬೆಂಗಳೂರು, ಮೇ 10: ನುಡಿದಂತೆ ನಡೆದ ಹಾಗೂ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಬೇಕು ಎಂದು ದ್ರಾವಿಡ ಹಿಂದೂ ಮಹಾಸಭಾ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಆರ್.ಶ್ರೀನಿವಾಸ್, ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿದ್ದು, ಅದರಲ್ಲಿ 159 ಭರವಸೆಗಳನ್ನು ಈಡೇರಿಸಿದ್ದಾರೆ. ಅಲ್ಲದೆ, ಭರವಸೆ ನೀಡದ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಹೀಗಾಗಿ, ಮತ್ತೊಂದು ಐದು ವರ್ಷ ಅಧಿಕಾರ ನೀಡುವ ಮೂಲಕ ಜನಪರ ಆಡಳಿತ ನೀಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಕರ್ನಾಟಕದ ಇತಿಹಾಸದಲ್ಲಿಯೇ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿ ಹಾಗೂ ಸಚಿವರ ಪಕ್ಷವನ್ನು ಮತ್ತೊಂದು ಬಾರಿ ಗೆಲ್ಲಿಸುವ ಮೂಲಕ, ರಾಜ್ಯವನ್ನು ಮತ್ತಷ್ಟು ಭ್ರಷ್ಟ ರಾಜ್ಯವನ್ನಾಗಿ ಮಾಡಬಾರದು. ಅಲ್ಲದೆ, ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಹಿರಿಯ ಚಿಂತಕ ಎಂ.ಎಂ. ಕಲಬುರ್ಗಿಯನ್ನು ಹತ್ಯೆ ಮಾಡಿದ ಹಿನ್ನೆಲೆಯುಳ್ಳ ಬಿಜೆಪಿ ಪಕ್ಷಕ್ಕೆ ಅಧಿಕಾರ ಬರಬಾರದು. ಬಿಜೆಪಿ ಅಧಿಕಾರಕ್ಕೆ ಬಂದರೆ ಜನರು ನೆಮ್ಮದಿಯನ್ನು ಹಾಳು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರು ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿದರು. 10 ಕೋಟಿ ಹಣ ಲಂಚ ನೀಡಿ ನ್ಯಾಯಾಧೀಶರನ್ನು ಕೊಂಡುಕೊಳ್ಳಲು ಪ್ರಯತ್ನಿಸಿದರು. ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿ ಮಗಳ ಮದುವೆ ಮಾಡಿದರು ಎಂದ ಅವರು, ಕನ್ನಡದ ಭಾಷಾಭಿಮಾನ, ನೆಲ, ಜಲ ಮತ್ತು ಗಡಿಯನ್ನು ಕಾಪಾಡುವಲ್ಲಿ ವಿಫಲವಾದ ಬಿಜೆಪಿ ಪಕ್ಷಕ್ಕೆ ಮತ ಹಾಕಬಾರದು ಎಂದು ತಿಳಿಸಿದರು.
ಡಾ.ಬಾಬಾ ಸಾಹೇಬ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡಲು ನಾವು ಬಂದಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಾರೆ. ಮತ್ತೊಂದು ಕಡೆ ಮೋದಿ ಪ್ರಧಾನಿಯಾದ ನಂತರ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲ ಮಾಡಲು ಮುಂದಾಗಿದ್ದಾರೆ. ಬಿಜೆಪಿಯು ಮೇಲ್ಜಾತಿಗಳ ಕೈಯಲ್ಲಿದ್ದು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ದಮನ ಮಾಡಿ, ಬ್ರಾಹ್ಮಣ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ, ಬಿಜೆಪಿಯನ್ನು ತಿರಸ್ಕರಿಸಿ ಎಂದು ಅವರು ನುಡಿದರು.