ಉತ್ತರ ಪ್ರದೇಶದ ಜಂಗಲ್ ರಾಜ್ಯ ಮಾದರಿಯ ಆಡಳಿತ ಕರ್ನಾಟಕಕ್ಕೆ ಬೇಡ: ಜಿಗ್ನೇಶ್ ಮೇವಾನಿ

Update: 2018-05-10 15:02 GMT

ಬೆಂಗಳೂರು, ಮೇ 10: ಕರ್ನಾಟಕ ರಾಜ್ಯಕ್ಕೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರ ಮಾದರಿ ಆಡಳಿತ ಬೇಡ ಎಂದು ಗುಜರಾತ್‌ನ ಶಾಸಕ ಹಾಗೂ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ, ಜಂಗಲ್ ರಾಜ್ಯ ನಿರ್ಮಾಣವಾಗಿದೆ. ಅಂತಹ ಮಾದರಿ ಆಡಳಿತ ಕರ್ನಾಟಕಕ್ಕೆ ಬೇಡ ಎಂದು ತಿಳಿಸಿದರು.

ಯೋಗಿ ಆದಿತ್ಯನಾಥ್ ಸಿಎಂ ಆದ ನಂತರ 2 ಸಾವಿರಕ್ಕೂ ಅಧಿಕ ಎನ್‌ಕೌಂಟರ್‌ಗಳು ನಡೆದಿದ್ದು, ಅದರಲ್ಲಿ ಬಹುತೇಕರು ಅಮಾಯಕರು ಬಲಿಯಾಗಿದ್ದಾರೆ. ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಕರ್ನಾಟಕ ಬಸವಣ್ಣರ ನಾಡು. ಇಲ್ಲಿ ಸಮ ಸಮಾನತೆಯಿದೆ. ನಿಮ್ಮ ಅಭಿವೃದ್ಧಿ ಮಾದರಿಯನ್ನು ಇಲ್ಲಿ ಪ್ರದರ್ಶಿಸಬೇಡಿ ಎಂದು ಹೇಳಿದರು.

ಮೋದಿಗೆ ಸವಾಲು: ಪ್ರಧಾನಿ ಮೋದಿ ದೇಶದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆಯುತ್ತಿದ್ದು, ಜನರಿಗೆ ನೀಡಿದ ಒಂದು ಭರವಸೆಯನ್ನು ಈಡೇರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು 15 ನಿಮಿಷಗಳ ಕಾಲ ತಮ್ಮ ಭಾಷಣದಲ್ಲಿ ಹೇಳಲಿ ಎಂದು ಸವಾಲು ಹಾಕಿದ ಅವರು, ಲವ್ ಜಿಹಾದಿ, ಘರ್ ವಾಪಸಿ ಹೆಸರಿನಲ್ಲಿ ಕೋಮು ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಮಾಡಿರುವುದಾಗಿ ಪ್ರಧಾನಿ ಮೋದಿ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಆದರೆ, ಅವರು 20 ವರ್ಷಗಳ ಕಾಲ ಅಧಿಕಾರ ನಡೆಸಿದ ಗುಜರಾತ್ ಅಭಿವೃದ್ಧಿ ಸೂಚ್ಯಂಕದಲ್ಲಿ ಅತ್ಯಂತ ಹಿಂದುಳಿದಿದೆ. ಆದರೂ, ಬಿಜೆಪಿ ಹಾಗೂ ನರೇಂದ್ರ ಮೋದಿ ಅಭಿವೃದ್ಧಿ ಮಾಡಿರುವುದಾಗಿ ಹೇಳಿಕೆ ನೀಡುತ್ತಿದ್ದು, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಗುಜರಾತ್ ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಧ್ಯಮಗಳ ಪ್ರತಿಕ್ರಿಯೆಗೂ ಸಿಗುತ್ತಿಲ್ಲ. ಆದರೆ, ಚುನಾವಣಾ ಭಾಷಣಗಳಲ್ಲಿ ಅಭಿವೃದ್ಧಿ ಮಂತ್ರ ಜಪ ಮಾಡುತ್ತಿದ್ದಾರೆ. ಮಾತಿನಲ್ಲಿ ಹೇಳುವುದನ್ನು ಅನುಷ್ಟಾನ ಮಾಡುತ್ತಿಲ್ಲ. ಉದ್ಯೋಗಗಳನ್ನು ಸೃಷ್ಟಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಇವರ ಮಾತುಗಳಿಗೆ ಮರಳಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸೇಡಿ ಎಂದು ಅವರು ಕರೆ ನೀಡಿದರು.

ಗುಜರಾತ್‌ನ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯ ವೈದ್ಯ ಕಫೀಲ್ ಖಾನ್ ಮಾತನಾಡಿ, ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಏಜೆನ್ಸಿಗೆ ಸುಮಾರು 60 ಲಕ್ಷ ರೂ.ಗಳನ್ನು ಸರಕಾರ ಬಾಕಿ ಉಳಿಸಿಕೊಂಡಿತ್ತು. ಹಣ ನೀಡದೆ ಸತ್ತಾಯಿಸುತ್ತಿದ್ದ ಪರಿಣಾಮ ಆಮ್ಲಜನಕ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದಾಗಿ 60 ಮಕ್ಕಳು ಸಾಯಲು ಕಾರಣವಾಯಿತು.

ಆದರೆ, ಈ ಬಗ್ಗೆ ಆರೋಗ್ಯ ಸಚಿವರಾಗಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ತನಿಖೆ ನಡೆಸಲು ಮುಂದಾಗಲಿಲ್ಲ. ಅಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ನನ್ನ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಹೈಕೋರ್ಟ್ ಜಾಮೀನು ನೀಡಿದೆ ಎಂದ ಅವರು, ಮುಂದಿನ ಎರಡು ವರ್ಷಗಳ ಕಾಲ ನಿನ್ನನ್ನು ಹೊರಗಡೆ ಬಾರದಂತೆ ತಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಯುನೈಟೆಡ್ ಅಗೈನ್ಸ್ ಸ್ಟೇಟ್ ಸಂಘಟನೆಯ ನದೀಂ ಖಾನ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕರ್ನಾಟಕ ಜನಶಕ್ತಿಯ ಗೌರಿ, ಕ್ಷಿತಿಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News