ಚುನಾವಣೆಗೆ 48 ಗಂಟೆ ಮೊದಲು ಧ್ವನಿ ವರ್ಧಕ, ಜಾಹೀರಾತು ನಿಷೇಧ: ಸಂಜೀವ್‌ ಕುಮಾರ್

Update: 2018-05-10 15:18 GMT

ಬೆಂಗಳೂರು, ಮೇ 10: ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿನ ಚೀಟಿ ಇಲ್ಲದಿದ್ದರೂ ಸರಕಾರದಿಂದ ಮಾನ್ಯತೆ ಪಡೆದ 15 ವಿವಿಧ ಗುರುತಿನ ಚೀಟಿ ತೋರಿಸುವ ಮೂಲಕ ಮತದಾನ ಮಾಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತದಾರರ ಬಳಿ ಗುರುತಿನ ಚೀಟಿ ಇಲ್ಲದಿದ್ದರೆ, ಪಾಸ್ ಫೋರ್ಟ್, ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಸೇರಿದಂತೆ 15 ವಿವಿಧ ಗುರುತಿನ ಚೀಟಿ ತೋರಿಸಿದರೆ ಮತದಾನಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಈ ಬಾರಿ ಹೊಸದಾಗಿ 15.73 ಲಕ್ಷ ಮತದಾರರು ನೋಂದಣಿ ಮಾಡಿಕೊಂಡಿದ್ದು, ಶೇ.100ರಷ್ಟು ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿದೆ. ಈ ಸಂಬಂಧ ಚುನಾವಣಾ ಆಯೋಗ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಬಾರ್‌ಗಳು ಬಂದ್: ಚುನಾವಣೆ ಹಿನ್ನೆಲೆಯಲ್ಲಿ ಮೇ10ರ ಸಂಜೆ 6 ಗಂಟೆಯಿಂದ ಮೇ 13ರ ಸಂಜೆ 6 ರವರೆಗೆ ಹಾಗೂ ಮತ ಎಣಿಕೆ ದಿನವಾದ ಮೇ 15ರ ಬೆಳಗ್ಗೆಯಿಂದ ಮೇ 16 ರವರೆಗೆ ಬಾರ್‌ಗಳು ಸಂಪೂರ್ಣವಾಗಿ ಬಂದ್ ಆಗಬೇಕು ಎಂದು ಅವರು ಸೂಚಿಸಿದರು.

ಪ್ರತಿಜ್ಞಾವಿಧಿ ಸ್ವೀಕಾರ: ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವಕ ಯುವತಿಯರಿಂದ ಮತ ಚಲಾವಣೆಯ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಅವರಿಂದ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ರಾಜ್ಯದ ಒಟ್ಟು ಮತದಾರರಲ್ಲಿ 15.72ಲಕ್ಷ ಯುವ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಾಹೀರಾತು ನಿಷೇಧ: ಚುನಾವಣೆಗೂ 48 ಗಂಟೆ ಮೊದಲು ಧ್ವನಿ ವರ್ಧಕದ ಬಳಕೆ ನಿಷೇಧಿಸಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪಕ್ಷಗಳ ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಅಗತ್ಯವಾಗಿದೆ. ಆಕ್ಷೇಪಾರ್ಹ ಸುದ್ದಿಗಳು ಹಾಗೂ ಕಾಸಿಗಾಗಿ ಸುದ್ದಿ ಪ್ರಕಟಿಸುವುದನ್ನು ಸಂಜೆ 6ಗಂಟೆಯಿಂದ ನಿಷೇಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಾರ್ವಜನಿಕ ಸಭೆ ನಿಷೇಧ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಗುರುವಾರ ಸಂಜೆ 6 ಗಂಟೆಯಿಂದ ಚುನಾವಣಾ ಸಮಾವೇಶ ಸೇರಿದಂತೆ ಯಾವುದೆ ರೀತಿಯ ಸಾರ್ವಜನಿಕ ಸಭೆಗೆ ನಿಷೇಧ ಹೇರಲಾಗಿದ್ದು, ಬೇರೆ ಕ್ಷೇತ್ರಗಳಿಂದ ಬಂದು ಉಳಿದು ಕೊಂಡಿರುವ ಜನಪ್ರತಿನಿಧಿಗಳು ಹೊರಗೆ ಹೋಗಬೇಕಾಗುತ್ತದೆ. ಒಂದು ವೇಳೆ ರಾಷ್ಟ್ರೀಯ ನಾಯಕರು ಇದ್ದರೆ ಮನೆ ವಿಳಾಸ ನೀಡಬೇಕು. ಅವರು ಮನೆ ಹಾಗೂ ಪಕ್ಷದ ಕಚೇರಿಯಲ್ಲಿ ಮಾತ್ರ ಉಳಿಯಲು ಅವಕಾಶವಿದೆ.

ಮುಖ್ಯಾಂಶಗಳು
-ನಾಳೆಯಿಂದ ಬಹಿರಂಗ ಪ್ರಚಾರಕ್ಕೆ ನಿಷೇಧ
-5ಮಂದಿಗಿಂತ ಹೆಚ್ಚಿನವರು ಗುಂಪು ಸೇರುವಂತಿಲ್ಲ.
-ಮಾರಾಕಾಸ್ತ್ರಗಳ ಸಂಗ್ರಹಣೆ, ಸಾಗಾಣೆಗೆ ನಿಷೇಧ
-ನಾಳೆಯಿಂದ ಚುನಾವಣೆ ಮುಗಿಯುವವರೆಗೆ ಬಾರ್‌ಗಳು ಬಂದ್
-ಜನಪ್ರತಿನಿಧಿಗಳು ತಮ್ಮ ಸ್ವಕ್ಷೇತ್ರಕ್ಕೆ ವಾಪಸಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News