ಚುನಾವಣಾ ಆಯೋಗದಿಂದ ಸಿಬ್ಬಂದಿ ಕ್ಷೇಮಾಭಿವೃದ್ಧಿ ನೀತಿ ಪ್ರಕಟ

Update: 2018-05-10 15:24 GMT

ಬೆಂಗಳೂರು, ಮೇ 10: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಎದುರಿಸಬಹುದಾದ ಪರಿಸ್ಥಿತಿಗಳ ಕುರಿತು ಕೇಂದ್ರ ಚುನಾವಣಾ ಆಯೋಗ ತನ್ನ ನೀತಿಯನ್ನು ಪ್ರಕಟಿಸಿದೆ.

ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಯು ನಿಧನ ಹೊಂದಿದ ಸಂದರ್ಭದಲ್ಲಿ ಆ ಅಧಿಕಾರಿಯ ಹತ್ತಿರದ ರಕ್ತ ಸಂಬಂಧಿಗೆ 10 ಲಕ್ಷ ರೂ.ಗಳನ್ನು ಸಂದಾಯ ಮಾಡಬೇಕು. ಮರಣವು ಯಾವುದೇ ಹಿಂಸಾತ್ಮಕ ಚಟುವಟಿಕೆ, ಉಗ್ರಗಾಮಿಗಳು ಅಥವಾ ಪ್ರಕೃತಿ ವಿಕೋಪ, ಬಾಂಬ್ ದಾಳಿ, ಸಮಾಜ-ಘಾತುಕ ಅಂಶಗಳಿಂದ ಸಂಭವಿಸಿದ್ದಲ್ಲಿ, ಪರಿಹಾರದ ಮೊತ್ತವು ದ್ವಿಗುಣಗೊಳಿಸಿ 20 ಲಕ್ಷ ರೂ.ಗಳನ್ನು ನೀಡಬೇಕು.

ಅಂಗವಿಕಲತೆ, ದೃಷ್ಟಿ ಕಳೆದುಕೊಳ್ಳುವುದು ಇತ್ಯಾದಿ ಶಾಶ್ವತ ಶಾರೀರಿಕ ದೌರ್ಬಲ್ಯಗಳು ಉಂಟಾದ ಸಂದರ್ಭದಲ್ಲಿ ಕನಿಷ್ಠ 5 ಲಕ್ಷ ರೂಗಳನ್ನು ಅನುಗ್ರಹ ಪೂರಕ ಪರಿಹಾರವಾಗಿ ಸಂದಾಯ ಮಾಡುವುದು. ಇಂತಹ ಅವಘಡಗಳು ಉಗ್ರಗಾಮಿಗಳು ಅಥವಾ ಸಮಾಜ ಘಾತುಕ ಶಕ್ತಿಗಳಿಂದ ಸಂಭವಿಸಿದಲ್ಲಿ ಈ ಪರಿಹಾರವನ್ನು ದ್ವಿಗುಣಗೊಳಿಸಬೇಕು. ಇದರೊಂದಿಗೆ ರಾಜ್ಯ ಸರಕಾರವು ಸರಕಾರಿ ನೌಕರರಿಗೆ ಕೆಸಿಎಸ್‌ಆರ್ ನಿಯಮಗಳನ್ವಯ ಡಿ.ಸಿ.ಆರ್.ಜಿ. ನಿವೃತ್ತಿ ವೇತನ, ಕೆಜಿಐಡಿ, ಸಾಮೂಹಿಕ ಜೀವವಿಮೆ(ಜಿ.ಐ.ಎಸ್.) ಸೇರಿದಂತೆ ಲಭ್ಯವಿರುವ ಇತರೆ ಎಲ್ಲಾ ಅರ್ಹ ಸವಲತ್ತುಗಳನ್ನು ನೀಡಲಾಗುತ್ತಿದೆ.

ತುರ್ತು ವೈದ್ಯಕೀಯ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡಲು ವೈದ್ಯರ ತಂಡವನ್ನು ನಿಯೋಜಿಸಬೇಕು. ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ದೊರೆಯಬೇಕು. ಚುನಾವಣಾ ಸಿಬ್ಬಂದಿಗೆ ಮತದಾನದ ದಿನವಷ್ಟೇ ಅಲ್ಲದೆ, ಚುನಾವಣಾ ಕಾರ್ಯಕ್ಕೆ ತೆರಳುವ ಮತ್ತು ಅಲ್ಲಿಂದ ಮರಳುವ ದಿನಗಳಂದು ರವಾನೆ ಕೇಂದ್ರಗಳಲ್ಲಿ ಹಾಗೂ ತರಬೇತಿ ದಿನಗಳಂದು ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಬೇಕು ಎಂದು ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News