ಸೈನಿಕರನ್ನು ನಿರ್ಲಕ್ಷಿಸಿದ ಕೇಂದ್ರ ಸರಕಾರ: ಬಿಜೆಪಿಗೆ ತಕ್ಕ ಪಾಠ ಕಲಿಸಲು ಮಾಜಿ ಯೋಧರ ಮನವಿ
ಬೆಂಗಳೂರು, ಮೇ 10: ಅಧಿಕಾರಕ್ಕೆ ಬಂದ ತಕ್ಷಣ ‘ಒನ್ ರ್ಯಾಂಕ್ ಒನ್ ಪೆನ್ಷನ್’ ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷ ಕಳೆದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಸೈನಿಕರ ವಿಭಾಗದ ಮುಖಂಡ ಕ್ಯಾಪ್ಟನ್ ಪ್ರವೀಣ್ ದವರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಅಧಿಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಒನ್ ರ್ಯಾಂಕ್ ಒನ್ ಪೆನ್ಷನ್ ಜಾರಿ ವ್ಯವಸ್ಥೆಯ ಪ್ರಕ್ರಿಯೆ ಆರಂಭ ಮಾಡಿದ್ದರು. ಆದರೆ, ಅನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಈ ವೇಳೆ ಪ್ರಧಾನಿ ಮೋದಿ ಈ ಯೋಜನೆ ಜಾರಿ ಮಾಡಲು ಭರವಸೆ ನೀಡಿದ್ದರು. ಇದುವರೆಗೂ ಅದನ್ನು ಜಾರಿ ಮಾಡಿಲ್ಲ. ಮಾಜಿ ಸೈನಿಕರ ಮನವಿಯನ್ನು ಪರಿಗಣಿಸದೆ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.
ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಳೆದ 1060 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೂ ಸೈನಿಕರತ್ತ ಗಮನ ಹರಿಸುತ್ತಿಲ್ಲ. ಸೈನಿಕರಾಗಿದ್ದು ದೇಶದ ರಕ್ಷಣೆ ಮಾಡಿರುವ ನಾವು ಇಂದು ನಮ್ಮ ಸೌಲಭ್ಯಗಳಿಗಾಗಿ ಬೀದಿಗೆ ಬರುವಂತಾಗಿದೆ. ಭರವಸೆ ನೀಡಿ ಈಡೇರಿಸದ ಬಿಜೆಪಿಗೆ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು ಎಂದು ಕೋರಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಭಾರತ ದೇಶದ ಸೈನ್ಯದ ಇತಿಹಾಸ ಗೊತ್ತಿಲ್ಲ. ಚುನಾವಣೆಯ ಲಾಭಕ್ಕಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಫೀಲ್ಡ್ ಮಾರ್ಷಲ್ ಕರಿಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ಇಬ್ಬರು ನಾಯಕರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಆದರೂ ತಪ್ಪು ಸಂದೇಶ ರವಾನಿಸಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಅವರು ಕಿಡಿಕಾರಿದರು.