ಆಮ್‌ಆದ್ಮಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನ : ಖಂಡನೆ

Update: 2018-05-10 16:08 GMT

ಬೆಂಗಳೂರು, ಮೇ 10: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಯಮಾನುಸಾರ ಅನುಮತಿ ಪಡೆದು ಪ್ರಚಾರ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ನಡೆಸಲು ಮುಂದಾಗಿರುವುನ್ನು ಆಮ್‌ಆದ್ಮಿ ತೀವ್ರವಾಗಿ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರಾದ ದರ್ಶನ್ ಜೈನ್, ಚುನಾವಣಾಧಿಕಾರಿಯ ಪೂರ್ವಾನುಮತಿ ಪಡೆದು ಕಮ್ಮನಹಳ್ಳಿ ಮುಖ್ಯ ರಸ್ತೆಯ ಬಳಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಘೋಷಣೆ ಕೂಗುತ್ತಾ ಬಂದ ಬಿಜೆಪಿಯ ಕಾರ್ಯಕರ್ತರು ನಮ್ಮ ರ್ಯಾಲಿಗೆ ಅಡ್ಡಿಪಡಿಸಲು ಮುಂದಾದರು ಎಂದು ಆರೋಪಿಸಿದರು.

ಈ ಬಗ್ಗೆ ಸ್ಥಳೀಯ ಪೋಲಿಸರಲ್ಲಿ ಮೌಖಿಕವಾಗಿ ದೂರು ನೀಡಿದರೆ, ಹಲ್ಲೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ವಿಚಾರಿಸುವ ಬದಲು ಆಮ್ ಅದ್ಮಿ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದಾರೆ ಎಂದ ಅವರು, ಬೆಂಗಳೂರು ನಗರದಲ್ಲಿ ಬಿಜೆಪಿಯ ಕಾರ್ಯಕರ್ತರ ಹಾವಳಿ ವಿಪರೀತವಾಗಿದ್ದು, ಆಮ್ಆದ್ಮಿ ಪಕ್ಷವನ್ನೇ ಗುರಿಯಾಗಿಟ್ಟುಕೊಂಡು ಸತತವಾಗಿ ಮೂರನೇ ದಿನ ಜಟಾಪಟಿ ನಡೆಸಿದ್ದಾರೆ ಎಂದು ದೂರಿದರು.

ಶಾಂತಿನಗರ ಹಾಗೂ ಸರ್ವಜ್ಞನಗರದಲ್ಲಿ ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಜಟಾಪಟಿಗೆ ಇಳಿದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿನಗರದಲ್ಲಿ ಕ್ಷಣಕ್ಷಣಕ್ಕೂ ಆಮ್ ಆದ್ಮಿ ಪಕ್ಷದ ಮೇಲೆ ಮುಗಿಬೀಳುತ್ತಿದ್ದಾರೆ. ಕುತಂತ್ರ ರಾಜಕಾರಣದಲ್ಲೂ ಎತ್ತಿದ ಕೈ ಎಂಬುದನ್ನು ಸಾಬೀತುಪಡಿಸಲು ಹಲವು ಡ್ರಾಮಾ ಕಂಪೆನಿಗಳನ್ನು ಶುರುಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News