ಮಹಾರ್ ಭೂಮಾಲಕತ್ವ ಮಸೂದೆಯ ಮೇಲಿನ ಕೆಲವು ಆಕ್ಷೇಪಗಳು

Update: 2018-05-10 18:31 GMT

ಭಾಗ-1

ಕಳೆದ ವರ್ಷ ‘ಮಹಾರ್ ಮತ್ತು ಅವರ ಭೂಮಾಲಕತ್ವ’ ಎನ್ನುವ ವಿಷಯದ ಮೇಲೆ ನಾವು ನಾಲ್ಕು ಸಂಪಾದಕೀಯ ಬರೆದಿದ್ದೆವು. ಅದರಲ್ಲಿ ಮಹಾರ್‌ಗಳ ಭೂಮಾಲಕತ್ವ ಹೇಗೆ ಅಧಃಪತನ ಹೊಂದುತ್ತಿದೆ ಮತ್ತು ಅದನ್ನು ಮುಂದೂಡಿದುದರಿಂದ ಭೂಮಾಲಕತ್ವದ ಕಾಯ್ದೆಯಲ್ಲಿ ಎಂಥ ಸುಧಾರಣೆ ಮಾಡುವುದು ಅವಶ್ಯ ಎನ್ನುವುದನ್ನು ಸಂಗೋಪಾಂಗವಾಗಿ ವಿವೇಚಿಸಿದ್ದೇವೆ. ಈ ಲೇಖನಮಾಲೆಯಲ್ಲಿ ಭೂಮಾಲಕತ್ವದ ವಿಷಯ ನಾವು ಎಷ್ಟು ವಿಷದವಾಗಿ ಹೇಳಿದಷ್ಟೂ ನಮಗೆ ಭಯವಾಗುತ್ತದೆ. ಏಕೆಂದರೆ ಮಹಾರ್ ವಿಷಯದಲ್ಲಿ ನಾವು ಸೂಚಿಸುತ್ತಿರುವ ಸುಧಾರಣೆಗೆ ಅವರಿಂದ ಖಂಡಿತಾ ವಿರೋಧ ಬರುತ್ತದೆ ಎನ್ನುವ ಈ ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ‘‘ಭೂಮಾಲಕತ್ವದ ಮೇಲೆ ಪ್ರಹಾರ’’ ಎನ್ನುವ ಶೀರ್ಷಿಕೆಯಡಿ ಬುದ್ಧಿಯಿಲ್ಲದವರು ಒಂದು ಹಸ್ತ ಪತ್ರಿಕೆಯನ್ನು ಛಾಪಿಸಿ ಮಹಾರ್ ಜನರಿಗೆ ಹಂಚಿದರು. ಅವರು ಕೆಲವು ಕಡೆ ಮಹಾರ್ ಜನರ ದಿಕ್ಕುತಪ್ಪಿಸಿ ಅದರ ಮುಖಾಂತರ ಒಂದೆರಡು ಸಭೆಗಳನ್ನೂ ಸೇರಿಸಿದರು. ಆದರೆ ಮಹಾರ್ ಜನರ ವಿರೋಧ ಮೊದಲಿಗೆ ಕಂಡುಬಂದರೂ, ಈಗ ಅವರಿಗೆ ಅದು ಸ್ಪಷ್ಟವಾಗಿ ತಿಳಿದಿದೆ ಮತ್ತು ಭೂಮಾಲಕತ್ವದ ಮಸೂದೆಯನ್ನು ಕಾಯ್ದೆ ಕೌನ್ಸಿಲ್‌ನ ಮುಂದೆ ಇಡುವ ಮುಂಚೆ ಮಹಾರ್ ಜನರು ಎಷ್ಟು ವಿರೋಧ ವ್ಯಕ್ತಪಡಿಸಿದ್ದರೋ, ಅಷ್ಟೇ ಈಗ ಅವರು ಒಮ್ಮತದಿಂದ ಮಸೂದೆಯ ಪರವಾಗಿ ನಿಂತಿದ್ದಾರೆ. ಈ ಮಸೂದೆಗೆ ಈಗ ಇರುವ ವಿರೋಧವೆಂದರೆ ಅದು ಅನಪೇಕ್ಷಿತ ಕಡೆಯಿಂದ ಬಂದದ್ದಾಗಿದೆ.

ಮಹಾರ್ ಜನರು ಯಾವಾಗ ಈ ಮಸೂದೆಯ ವಿರುದ್ಧವಾಗಿದ್ದರೋ, ಆ ವೇಳೆಯಲ್ಲಿ ನಮ್ಮ ಸ್ಪಶ್ಯ ಬಂಧುಗಳು ನಮ್ಮನ್ನು ಸಂಪೂರ್ಣ ಬೆಂಬಲಿಸಿದ್ದರು. ಭೂಮಾಲಕತ್ವದ ಮೇಲಿನ ನಮ್ಮ ವಿಚಾರಕ್ಕೂ ಅವರು ಬೆಂಬಲಿಸಿದ್ದರು. ಇಷ್ಟೇ ಅಲ್ಲ ‘ಭೂ ಮಾಲಕತ್ವದ ಮೇಲೆ ಪ್ರಹಾರ’ ಎಂದು ಅರಚಿದ್ದ ಮಹಾರ್ ಬಂಧುಗಳ ಮೂರ್ಖತನವನ್ನೂ ಅವರು ಒಳಗೆ ಹಾಕಿಕೊಂಡಿದ್ದರು. ಆದರೆ ಮಸೂದೆಯ ಮೊದಲ ವಾಚನವಾಗುತ್ತಿದ್ದಂತೆಯೇ ನಮ್ಮ ಸ್ಪಶ್ಯ ಬಂಧುಗಳ ದೃಷ್ಟಿ ಒಂದೇ ಸಲಕ್ಕೆ ಬದಲಾಗಿ ವಿರುದ್ಧವಾಗುತ್ತಾ ಹೋಗುತ್ತಿದೆ. ಮಸೂದೆ ಕೌನ್ಸಿಲ್‌ಗೆ ಬರುವ ಮುಂಚೆ, ನಮ್ಮ ವಿಚಾರಕ್ಕೆ ಯಾರು ಸಂಪೂರ್ಣ ಸಮ್ಮತಿ ನೀಡಿದ್ದರೋ, ಅವರು ಕಾಯ್ದೆ ವಾಚನದ ಮೊದಲ ಸುತ್ತಿನ ನಂತರ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಇತ್ತೀಚೆಗೆ ಆ ಕಾಯ್ದೆಯನ್ನು ಕೌನ್ಸಿಲ್‌ನ ಆಯ್ದ ಸಭಾಸದರ ಸಮಿತಿಗೆ ಒಪ್ಪಿಸಲಾಗಿದೆ.

ಈ ಸಮಿತಿಯ ವರದಿ ಬಂದ ಮೇಲೆ ಎರಡನೆಯ ಅಥವಾ ಮೂರನೆಯ ಬಾರಿ ವಾಚಿಸಿ, ಆ ಕಾಯ್ದೆ ಕೌನ್ಸಿಲ್ ಮುಂದೆ ಬಂದು ಅದೇ ಕೊನೆಯ ನಿರ್ಣಯವಾಗುತ್ತದೆ. ವಿರೋಧಕರು ಹೇಳಿದಂತೆ ಏನಾದರೂ ತಥ್ಯ ಇದ್ದರೆ ಅದರ ಯೋಗ್ಯ ವಿಚಾರ, ಕಮಿಟಿ ಕಡೆಯಿಂದ ಬರದಿದ್ದರೆ ಏನೂ ಪ್ರಯೋಜನವಿಲ್ಲ. ಆದರೆ ಈ ಅಕ್ಷೇಪಣೆಯನ್ನು ಜನರಲ್ಲಿ ಹೀಗೇ ಹರಡಿದರೆ, ಕಾಯ್ದೆ ವಿರುದ್ಧ ನಿಷ್ಕಾರಣವಾಗಿ ಜನರ ಮನಸ್ಸು ಕಲುಷಿತವಾಗುವುದಂತೂ ನಿಜ. ಹಾಗೆ ಆಗದಿರಲಿ ಎಂದು ಮೇಲೆ ಹೇಳಿದ ಅಕ್ಷೇಪಣೆ ಅಪಾರ್ಥವಾಗದಿರಲು, ಕಾರ್ಯಸಿದ್ಧಿಯ ದೃಷ್ಟಿಯಿಂದ ನಮಗೆ ಆವಶ್ಯಕವೆನಿಸುತ್ತದೆ. ಆದ್ದರಿಂದಲೇ ಅದೇ ವಿಷಯದ ಮೇಲೆ ನಾವು ಪುನಃ ಬರೆಯುತ್ತಿದ್ದೇವೆ.

ಈ ವಿರೋಧಿಗಳ ಮುಖ್ಯ ಕಟಾಕ್ಷ ಮಸೂದೆಯ 6ನೆಯ ಕಲಂನ ಮೇಲಿದೆ. 
ಈ 6ನೆಯ ಕಲಂನ ಪ್ರಕಾರ ಒಬ್ಬ ಭೂಮಾಲಕತ್ವದ ಮಹಾರ್‌ನ ಗಳಿಕೆ ಧಾನ್ಯರೂಪದಲ್ಲಿ ಸಿಗಬೇಕು, ಕೂಲಿ ದ್ರವ್ಯರೂಪದಲ್ಲಿ ಸಿಗಬೇಕು, ಎಂದು ಕಲೆಕ್ಟರ್ ಕಡೆ ಅರ್ಜಿಯನ್ನು ಕೊಟ್ಟರೆ ಹಾಗೆ ಕಲೆಕ್ಟರ್ ಅದನ್ನು ಕಾರ್ಯಾನ್ವಿತ ಮಾಡಬೇಕು ಮತ್ತು ಅದರ ಒಟ್ಟು ಮೊತ್ತವನ್ನು ಕೃಷಿ ಭೂಮಿಯಿಂದ ವಸೂಲು ಮಾಡಿ ಅವನಿಗೆ ಉತ್ಪನ್ನವನ್ನು ಸರಕಾರದ ತಿಜೋರಿಯಿಂದ ಮಹಾರ್ ಭೂಮಾಲಕನಿಗೆ ನೀಡಬೇಕು ಎಂದು ಕಾಯ್ದೆಯ ಮೊದಲ ಒಳ ಕಲಂನಲ್ಲಿ ಹೇಳಿದೆ. ಯಾವಾಗ ಈ ಕೂಲಿ ಸರಕಾರದ ಮತ್ತು ರೈತರ ನೌಕರಿಯ ಬದಲಾಗಿ ಪ್ರತಿಫಲವೆಂದು ಇಟ್ಟಿದ್ದರೆ, ಅಲ್ಲಿ ಅವರವರ ಬೇಡಿಕೆಯ ನಗದು ವೇತನವನ್ನು, ಸರಕಾರದ ನೌಕರರಿಗೆ ಎಷ್ಟು ಮತ್ತು ರೈತರಿಗೆ ಎಷ್ಟು ಎನ್ನುವುದನ್ನು ನಿಗದಿ ಮಾಡಲು ಕಲೆಕ್ಟರ್ ಕಡೆ ಅರ್ಜಿಯನ್ನು ಹಾಕಬೇಕಾಗಿ ಬಂದಾಗ ಅಂಥ ವ್ಯವಸ್ಥೆಯನ್ನು ಅವರು ಮಾಡಬೇಕು. ಇದು 2ನೇ ಪೋಟ್ ಕಲಂನ ಅರ್ಥವಾಗಿದೆ. 3ನೇ ಪೋಟ್ ಕಲಂನಲ್ಲಿ ಬೇಡಿಕೆ ಹೀಗಿದೆ. ‘‘ರೈತರ ನೌಕರಿಯು, ಭೂಮಾಲಕ ಮಹಾರ್ ಅವರ ಮರ್ಜಿಯ ಮೇಲೆ ಅವಲಂಬಿತವಾಗಿದೆ. ಅವರು ರೈತಾಪಿ ಕೆಲಸವನ್ನು ಬಿಟ್ಟರೆ ರೈತಾಪಿ ಕೆಲಸದ ಬದಲು ನಗದು ವೇತನದ ಯಾವ ಭಾಗವನ್ನು ನಿಶ್ಚಿತಗೊಳಿಸಿದ್ದರೆ, ಅದರ ಮೇಲೆ ಅವರ ಹಕ್ಕು ಇರುವುದಿಲ್ಲ.’’ ಮೇಲಿನ ಪ್ರಕಾರ ಮಸೂದೆಯ 6ನೆಯ ಕಲಂನ ಸ್ವರೂಪ ಹೀಗಿದೆ. ಇದರ ಮೇಲೆ ಅಕ್ಷೇಪಣೆ ಮಾಡುವವರು ಪುಣೆಯ ‘ಶೇತಕರಿ ಸಂಘ’ ಅಹಮದ್ ನಗರದ ‘ದೀನ ಮಿತ್ರ’ ಮತ್ತು ಬೆಳಗಾವಿಯ ‘ರಾಷ್ಟ್ರವೀರ’ ಈ ಮೂರರ ಪ್ರಾಮುಖ್ಯವನ್ನು ಗಮನಿಸುವುದು ಒಳ್ಳೆಯದು. ಅವರ ಅಭಿಪ್ರಾಯದಲ್ಲಿ 6ನೆಯ ಕಲಂನಲ್ಲಿ ಸೂಚಿಸಿದ ವ್ಯವಸ್ಥೆ ಕಾರ್ಯಾನ್ವಿತವಾದರೆ ಆ ಕಲಂನನ್ವಯ-ಕೃಷಿಯ ಮೇಲೆ ಒಂದು ಹೊಸ ತೆರಿಗೆಯ ಆಪತ್ತು ಬೀಳುತ್ತದೆ.

ನಾವು ಈ ವಿಷಯದಲ್ಲಿ ಸಾಧ್ಯವಾದಷ್ಟೂ ಯೋಚಿಸಿದ್ದೇವೆ. ಆದರೆ 6ನೆಯ ಕಲಂನಲ್ಲಿ ಕೃಷಿಯ ಮೇಲೆ ಹೊಸ ತೆರಿಗೆಯನ್ನು ಹೇರುವರು ಎಂದು ಹೇಳಲು, ಯಾವ ಆಧಾರವೂ ನಮಗೆ ಕಾಣಿಸುತ್ತಿಲ್ಲ. ಈ 6ನೆಯ ಕಲಂನಲ್ಲಿ ಅವರಿಗೆ ಇಷ್ಟು ಕರುಣೆ ತೋರುವ ಕಾರಣವೇನೆಂದರೆ ಈ ಕಲಂನಲ್ಲಿ ಮಹಾರ್ ರೈತರಿಗೆ ನೌಕರಿ ಬೇಡ ಎನ್ನುವ ಅಧಿಕಾರವನ್ನು ಕೊಟ್ಟಿರಬಹುದಾಗಿತ್ತು. ಸರಕಾರಿ ಕೆಲಸದ ಪೂರ್ತಿ, ರೈತರಿಗೆ ಕೂಲಿ ಬೇಡುವ ಹಕ್ಕನ್ನು ಉಳಿಸಿಕೊಳ್ಳಲೋಸುಗವೇ ಇರಬೇಕು. ‘ರಾಷ್ಟ್ರವೀರ’ಕಾರರ ಅಭಿಪ್ರಾಯದ ಪ್ರಕಾರ ‘‘ಭೂಮಾಲಕತ್ವದ ಮಹಾರರಿಗೆ ಕೃಷಿಯಿಂದ ಏನು ಕೂಲಿ ಸಿಗುತ್ತದೋ ಅದು ಪ್ರಮುಖವಾಗಿ ರೈತೋಪಯೋಗಿ ನೌಕರರ ಸಲುವಾಗಿ ಇರಬೇಕು. ಸರಕಾರಿ ನೌಕರಿಯ ಸಲುವಾಗಿ ಅವರು ಪಾಟೀಲ, ಕುಲಕರ್ಣಿ ಮತ್ತು ಗುತ್ತಿಗೆಯವರ ಪ್ರಮಾಣದಲ್ಲಿ ಜಮೀನಿಂದಲೇ ಕೊಡಬೇಕಾಗಿದೆ.’’

ಅಂದರೆ ರೈತಾಪಿ ಕೆಲಸವನ್ನು ಮಾಡದ ಮಹಾರರಿಗೆ, ರೈತರ ಸಲುವಾಗಿ ಕೂಲಿ, ಹಾಗೆಯೇ ಯಾವುದಾದರೂ ಅಂಶದಲ್ಲಿ ಬೇಡುವ ಹಕ್ಕು ಕೊಡುವುದು, ಇದು ವಿನಾಕಾರಣ ರೈತರ ಮೇಲೆ ಒಂದು ಹೊಸ ಹೊರೆಯನ್ನು ಹಾಕಿದ ಅನ್ಯಾಯವಾಗುತ್ತದೆ ಎಂದು ಅವರಿಗೆ ಅನ್ನಿಸುತ್ತದೆ. ಕೂಲಿಯನ್ನು ಹೇಗಾದರೂ ಕೊಡಬಹುದು ಎನ್ನುವುದಕ್ಕೆ ‘ರಾಷ್ಟ್ರವೀರ’ಕಾರರು ಯಾವ ಅಭಿಪ್ರಾಯವನ್ನು ಹೊಂದಿದ್ದಾರೋ, ಅದು ನಿಜವಾಗಿದ್ದಲ್ಲಿ 6ನೆಯ ಕಲಂನ ನಿಯಮ ಅನ್ಯಾಯಕಾರಿಯಾಗಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ‘ರಾಷ್ಟ್ರವೀರ’ಕಾರರು ಅಪಾರ್ಥಮಾಡಿಕೊಂಡು ನ್ಯಾಯವನ್ನು ಅನ್ಯಾಯವೆಂದು ಹೇಳದಿರುವುದು ಯಾವ ಆಧಾರದ ಮೇಲೆ? ಇಬ್ಬರ ಪೈಕಿ ಯಾರು ಸತ್ಯ ಎನ್ನುವುದು ನಿಶ್ಚಯವಾಗುವ ಮೊದಲು, ಕೂಲಿ ಹೇಗೆ ಕೊಡಬೇಕೆನ್ನುವುದನ್ನು ನಿರ್ಧರಿಸುವುದು ಆವಶ್ಯಕವಾಗಿದೆ. ಮಸೂದೆಯಲ್ಲಿ 6ನೆಯ ಕಲಂನ ಸಲುವಾಗಿ ನಿಂತವರು ಯಾವ ಅಭಿಪ್ರಾಯದಿಂದ ಒಪ್ಪಿಕೊಂಡಿದ್ದಾರೆಂದರೆ ಕೂಲಿ ರೈತರ ಕೆಲಸದ ಸಲುವಾಗಿಯೇ ಇದೆ. ಈ ನಮ್ಮ ಅಭಿಪ್ರಾಯ ‘ರಾಷ್ಟ್ರವೀರ’ಕಾರರ ಅಭಿಪ್ರಾಯಕ್ಕಿಂತ ಭಿನ್ನವಾಗಿದೆ ಎಂದು ವಿಶಿಷ್ಟವಾಗಿ ಹೇಳಬೇಕಾದ್ದೇನಿಲ್ಲ.

ಈ ಎರಡು ಅಭಿಪ್ರಾಯಗಳಲ್ಲಿ, ನಮ್ಮ ಅಭಿಪ್ರಾಯ ನಿಜವಾಗಿದ್ದಲ್ಲಿ ರೈತಾಪಿ ಕೆಲಸವನ್ನು ಮಾಡದಿರುವ ಮಹಾರರನ್ನು, ಸರಕಾರಿ ಕೆಲಸಕ್ಕೆ ಮಾತ್ರ ಎಷ್ಟು ಕೂಲಿಯಾಗುತ್ತದೋ ಅಷ್ಟು ಕೂಲಿಯನ್ನು ರೈತರಿಂದ ಬೇಡುವ ಹಕ್ಕು ಕೊಡುವುದಾದರೆ, ಅದಕ್ಕಾಗಿ ರೈತರ ಮೇಲೆ ಕಾರಣವಿಲ್ಲದ ಭಾರ ಬಿತ್ತು ಎಂದು ಯಾರೂ ಹೇಳುವಂತೆ ಆಗಬಾರದು. ಕುಲಕರ್ಣಿಯು ಭೂಮಾಲಕತ್ವದ ವಿಲೇವಾರಿ ಮಾಡುವಾಗ ಯಾವ ಸವಲತ್ತು ಅವನಿಗೆ ಕೊಡಬೇಕಾಗಿದೆಯೋ ಅವರ ಮತ್ತು ಮಹಾರ್‌ರ ಭೂಮಾಲಕತ್ವದ ಮಸೂದೆಯನ್ನು 6ನೆಯ ಕಲಂಗೆ ಹೋಲಿಸಿದರೆ ಈ ಮಸೂದೆ ಎಷ್ಟು ನ್ಯಾಯದ ದೃಷ್ಟಿಯಿಂದ ಘಟಿಸಿದೆ ಎನ್ನುವ ಕಲ್ಪನೆ ಬರುತ್ತದೆ. ಕುಲಕರ್ಣಿಗಳ ಭೂಮಾಲಕತ್ವ ತಾ.30 ಮೇ 1914ರ ನಂ.5070ರ ಸರಕಾರದ ಗೊತ್ತುವಳಿಯಲ್ಲಿ ಸರಕಾರಿ ಭೂಮಿಯಾಗಿ ಮಾಡಿದರೆ, ಆ ಗೊತ್ತುವಳಿಯ ಮೊದಲನೇ ನಿಯಮದಲ್ಲಿ ಹೀಗೆ ಹೇಳಿದ್ದಾರೆ. ‘‘1913-14 ಇಸವಿಯಲ್ಲಿ ಸಾಲ ತೆಗೆದ ಅಳತೆಯಂತೆ (ಜಮೀನಿನ ವಾರ್ಷಿಕ ಜಮಾಬಂದಿ ವಸೂಲು ಮಾಡುವ ಸಲುವಾಗಿ ಪಗಾರ) ಮತ್ತು ಜೀವನಾಂಶದ ಒಂದು ತೃತೀಯಾಂಶವನ್ನು ನಿಯಮಿತವಾಗಿ ಮಾಡಿ ಎಲ್ಲಿಯವರೆಗೆ ಭೂಮಾಲಕ ಪುರುಷ ವಾರಸುದಾರ ಅಂದರೆ ನೇರ ಅಥವಾ ಇನ್ಯಾವ ಭೂಮಾಲಕರು ಮನೆಯವರೇ ಆಗಿದ್ದರೆ ಅಥವಾ ಭೂಮಾಲಕನಿಂದ ಹೊರಗೆ ದತ್ತು- ಹೀಗೆ ಯಾರಾದರೂ ಇದ್ದರೆ ಅಲ್ಲಿಯವರೆಗೂ ನಿರಂತರವಾಗಿ ವಾರಸುದಾರನ ಭೂಮಾಲಕತ್ವ ಅವರ ನೇರ ಅಥವಾ ಇತರ ವೇತನದಾರರು ಮನೆಯವರೇ ಆಗಿದ್ದರೆ ಅಥವಾ ಮನೆ ಹೊರಗಿನ ದತ್ತು ಆದರೆ ಅವರ ವಾರಸುದಾರನಿಗೆ ಬ್ರಿಟಿಷ್ ಸರಕಾರದ ಕಡೆಯಿಂದ ನಡೆಯುತ್ತದೆ.

ಈ ಗೊತ್ತುವಳಿ ಪ್ರಕಾರ ಕುಲಕರ್ಣಿ ಸರಕಾರದ ನೌಕರಿ ಮಾಡದಿದ್ದರೂ ಸಹ ಅವರ ಮಾಲಕತ್ವದ ಜಮೀನು ಅವರಲ್ಲೇ ಉಳಿಯುವುದು. ಇಷ್ಟೇ ಅಲ್ಲ ಯಾವ ಒಂದು ಕೆಲಸವನ್ನು ಮಾಡದೆ 1913-14 ಇಸವಿಯಲ್ಲಿ ಸಾಲ ಮುಟ್ಟಿಸುವ ಪಗಾರದಲ್ಲಿ ಒಂದು ತೃತೀಯಾಂಶದ ಭಾಗ ಅವರಿಗೆ ಬಿಟ್ಟಿಯಾಗಿ ಸಿಗುತ್ತದೆ !! ಇದು ನಮಗೂ ಅನ್ಯಾಯವೆನಿಸುತ್ತದೆ. ಆದರೆ ನಮ್ಮ ಕುಲಕರ್ಣಿ ಲೀಲಾಮೃತಕಾರರಿಗೆ ಏನೆನ್ನಿಸುತ್ತದೆ ಯಾರು ಬಲ್ಲರು. ಮಹಾರರ ಹಕ್ಕಿನ ವಿರುದ್ಧ ತಕರಾರು ಮಾಡುವ ಜನರು ಈ ವಿಷಯದಲ್ಲಿ ವಿಚಾರ ಮಾಡುವ ಆವಶ್ಯಕತೆ ಇದೆ. ಆ ರೀತಿಯಲ್ಲಿ ನೋಡಿದರೆ ಮಸೂದೆಯ ಆರನೆಯ ಕಲಂನಲ್ಲಿ ಯಾವ ಅನ್ಯಾಯವೂ ಇಲ್ಲ ಎಂದು ನಮ್ಮ ಸ್ಪಷ್ಟವಾದ ಅಭಿಪ್ರಾಯ. ‘‘ರೈತಾಪಿ ಕೆಲಸವನ್ನು ಮಾಡದ ಮಹಾರ್‌ನಿಗೆ, ಈಗ ಸಿಗುವ ಒಟ್ಟು ಕೂಲಿ ಕೇಳುವ ಹಕ್ಕನ್ನು ಈ ಮಸೂದೆಯಲ್ಲಿ ಕೊಟ್ಟಿದ್ದರೆ ಅನ್ಯಾಯವಾಗುತ್ತಿತ್ತು.

ಇಂತಹ ಅನ್ಯಾಯವಾಗದಿರಲಿ ಎಂದು ಕೂಲಿಯ ವಿಂಗಡನೆ ಮಾಡಿ, ಸರಕಾರಿ ಕೆಲಸ ಮಾಡುವ ಮಹಾರ್‌ಗೆ ಸರಕಾರಿ ಕೆಲಸದಷ್ಟೇ ಕೂಲಿ ಸಿಗಬೇಕು ಎಂದು ಕಲಂನಲ್ಲಿ ಹಾಕಿದ್ದಾರೆ. ರೈತರದ್ದು ಏನಾದರಾಗಲಿ ಮಹಾರರ ಬೇಳೆ ಬೇಯಬೇಕು ಎನ್ನುವ ಸ್ವಾರ್ಥ ಬುದ್ಧಿಯಿಂದ ಈ ಮಸೂದೆಯ ಕೆಲಸದಲ್ಲಿ ಮೂಡಿದ್ದರೆ ಕೂಲಿಗಾಗಿ ವಿಂಗಡನೆ ಮಾಡುವ ನಿಯಮ, ಈ ಮಸೂದೆಯಲ್ಲಿ ಹಾಕುವ ಪ್ರಮೇಯ ಬರುತ್ತಿರಲಿಲ್ಲ. ನಾವು ಯಾವ ಅಭಿಪ್ರಾಯವನ್ನು ಹೊಂದಿದ್ದೇವೋ, ಅದು ವಿಚಿತ್ರ ಎಂದು ಮಹಾರ್ ಮತ್ತು ಸರಕಾರದವರು ಒಂದಾಗಿ ಒಪ್ಪಂದ ಮಾಡಿಕೊಂಡು, ಒತ್ತಾಯದಿಂದ, ಬೇಸಾಯಗಾರರ ಕುತ್ತಿಗೆ ಕೊಯ್ಯುವ ಪ್ರಯತ್ನವನ್ನು ಈ ಮಸೂದೆಯ ಮೂಲಕ ಮಾಡುತ್ತಿದ್ದಾರೆ. ಆದ್ದರಿಂದ ಹುಷಾರಾಗಿರಿ’’ ಎನ್ನುವ ಸೂಚನೆಯನ್ನು ಎಲ್ಲ ಬೇಸಾಯಗಾರರಿಗೂ ‘ರಾಷ್ಟ್ರವೀರ’ಕಾರರು ಕೊಡುತ್ತಿದ್ದಾರೆ. ಅಂತಹ, ಸರ್ವಥಾ ತಪ್ಪು ದಾರಿಯನ್ನು ‘ರಾಷ್ಟ್ರವೀರ’ ಸಂಪಾದಕರ ಕಡೆಯಿಂದ ಮಾಡಿಸುತ್ತಿದ್ದಾರೆ. ಇದರ ಮೇಲೆ ನಮಗೆ ಆಶ್ಚರ್ಯವಾಗುತ್ತಿದೆ.!

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News