ಶ್ರೀರಾಮುಲು ಕುರಿತು ಯಾವುದೇ ಸುದ್ದಿ ಪ್ರಕಟಿಸದಂತೆ ಹೈಕೋರ್ಟ್ ಆದೇಶ

Update: 2018-05-11 14:36 GMT

ಬೆಂಗಳೂರು, ಮೇ 11: ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಪಾತಿ ತೀರ್ಪು ಪಡೆಯಲು ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಪ್ರಭಾವ ಬೀರಿದ್ದರು ಎಂಬ ಆರೋಪದ ಕುರಿತಂತೆ ಯಾವುದೇ ಸುದ್ದಿ ಪ್ರಕಟಿಸದಂತೆ ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಸಲ್ಲಿಸಿರುವ ರಿಟ್ ಅರ್ಜಿಯನ್ನು ರಜಾಕಾಲದ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ವಿಚಾರಣೆ ನಡೆಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕಾರದಲ್ಲಿ ಟಿ.ವಿ.ಚಾನೆಲ್, ಸುದ್ದಿ ಪತ್ರಿಕೆ, ಡಿಜಿಟಲ್ ಮೀಡಿಯಾ, ರೇಡಿಯೋ, ಮನರಂಜನಾ ಚಾನೆಲ್‌ಗಳು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಪ್ರಕಟಿಸಬಾರದು ಎಂದು ನಿರ್ಬಂಧ ವಿಧಿಸಿ ನ್ಯಾಯಾಲಯವು ಆದೇಶಿಸಿದೆ.

ಯಾವುದೇ ಅಭ್ಯರ್ಥಿ ವಿರುದ್ಧ ವೈಯಕ್ತಿಕ ಘನತೆಗೆ ಧಕ್ಕೆ ಉಂಟು ಮಾಡುವ ಸುದ್ದಿಯನ್ನು ಯಾವುದೇ ಟಿ.ವಿ.ಚಾನೆಲ್, ಪತ್ರಿಕೆ, ಸೋಷಿಯಲ್ ಮೀಡಿಯಾ, ರೇಡಿಯೋ, ವೆಬ್ ಪೋರ್ಟಲ್‌ಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವನ್ನು ಈ ಕೂಡಲೇ ಎಲ್ಲ ಮಾಧ್ಯಮಗಳಿಗೆ ಇಮೇಲ್ ಮುಖಾಂತರ ತಲುಪಿಸುವಂತೆಯೂ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶಿಸಲಾಗಿದೆ.

ಅರ್ಜಿದಾರರ ಆಕ್ಷೇಪಗಳು ಏನು: ಆಧಾರರಹಿತ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ. ತನಿಖೆ, ವಿಚಾರಣೆ ಅಥವಾ ಕೋರ್ಟ್ ಆದೇಶಗಳಿಲ್ಲದೆ ದುರುದ್ದೇಶಪೂರ್ವಕವಾಗಿ ಪದೇ ಪದೇ ಪ್ರಕಟಿಸುತ್ತಿದ್ದಾರೆ, ಬಿತ್ತರಿಸುತ್ತಿದ್ದಾರೆ.

ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಪಕ್ಷದ ಘನತೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಆಧಾರ ರಹಿತ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಸುದ್ದಿ ಮಾಧ್ಯಮಗಳ ಮೇಲೆ ಮುಖ್ಯ ಚುನಾವಣಾ ಅಧಿಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ಮಾಧ್ಯಮಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ಇಲ್ಲವಾಗಿದೆ. ಇದರ ಹಿಂದೆ ಕೆಲವು ಹಿತಾಸಕ್ತಿಗಳ ಕೈವಾಡ ಇದೆ. ನಮ್ಮ ಅಭ್ಯರ್ಥಿ ರಾಮುಲುಗೆ ಮುಜುಗರ ಉಂಟು ಮಾಡಬೇಕು ಎಂಬುದೇ ಮಾಧ್ಯಮಗಳ ಉದ್ದೇಶವಾಗಿದೆ. ಇವರು ನಿವೃತ್ತ ಸಿಜೆಐ ವಿರುದ್ಧ ಆರೋಪ ಮಾಡುತ್ತಿದ್ದು ಇದರಿಂದ ನ್ಯಾಯಾಂಗದ ಘನತೆ ಮೇಲೆ ದಾಳಿ ನಡೆಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News