ಪ್ಲಿಸ್ಕೋವಾಗೆ ಜಯ, ಶರಪೋವಾ, ಹಾಲೆಪ್‌ಗೆ ಸೋಲು

Update: 2018-05-11 18:31 GMT

ಮ್ಯಾಡ್ರಿಡ್, ಮೇ 11: ರಶ್ಯದ ಮರಿಯಾ ಶರಪೋವಾ ಹಾಗೂ ರೊಮಾನಿಯದ ಸಿಮೊನಾ ಹಾಲೆಪ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಪ್ಲಿಸ್ಕೋವಾ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶರಪೋವಾ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಂಡ್‌ನ ಕಿಕಿ ಬೆರ್ಟೆನ್ಸ್ ವಿರುದ್ಧ 6-4, 2-6, 3-6 ಅಂತರದಿಂದ ಸೋತಿದ್ದಾರೆ. ಬೆರ್ಟೆನ್ಸ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ನ ಕರೋಲಿನಾ ಗಾರ್ಸಿಯಾರನ್ನು ಎದುರಿಸಲಿದ್ದಾರೆ. ಗಾರ್ಸಿಯಾ ಅವರು ಕಾರ್ಲಾ ಸುಯರೆಝ್ ನವಾರ್ರೊರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಇದೇ ವೇಳೆ ಆರನೇ ಶ್ರೇಯಾಂಕದ ಪ್ಲಿಸ್ಕೋವಾ ಅವರು ಮತ್ತೊಂದು ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಮೊನಾ ಹಾಲೆಪ್‌ರನ್ನು 6-4, 6-3 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪರ್ಧೆಯಲ್ಲಿರುವ ಗರಿಷ್ಠ ರ್ಯಾಂಕಿನ ಆಟಗಾರ್ತಿ ಪ್ಲಿಸ್ಕೋವಾ ಸೆಮಿ ಫೈನಲ್‌ನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ.

ಕರೋಲಿನಾ ವೋಝ್ನಿಯಾಕಿ, ಗಾರ್ಬೈನ್ ಮುಗುರುಝ, ಎಲಿನಾ ಸ್ವಿಟೋಲಿನಾ ಹಾಗೂ ಜೆಲೆನಾ ಒಸ್ಟಾಪೆಂಕೊ ಟೂರ್ನಿಯಲ್ಲಿ ಬೇಗನೇ ಸೋತ ಹಿನ್ನಲೆಯಲ್ಲಿ ಪ್ಲಿಸ್ಕೋವಾಗೆ ಪ್ರಶಸ್ತಿ ಜಯಿಸುವ ಅವಕಾಶ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News