×
Ad

"ಬೆಂಗಳೂರಿನ ಬೂತ್ ಒಂದರಲ್ಲಿ ಯಾವುದೇ ಗುಂಡಿ ಒತ್ತಿದರೂ 'ಕಮಲ'ಕ್ಕೆ ಮತ"

Update: 2018-05-12 13:23 IST

ಬೆಂಗಳೂರು, ಮೇ 12: ಚುನಾವಣೆ ಪೂರ್ವದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಮೇಲಿರುವ ಸಂಶಯ ಮುಂದುವರೆದಿದ್ದು, ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಯಾವುದೇ ಬಟನ್ ಒತ್ತಿದರೂ ಕಮಲ (ಬಿಜೆಪಿ) ಚಿಹ್ನೆಗೆ ಹೋಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಸಂಶಯ ಹೊರಹಾಕಿದ್ದಾರೆ.

‘ನನ್ನ ಪೋಷಕರ ಮನೆಯ ಬಳಿ ಇಲ್ಲಿನ ಹೆಬ್ಬಾಳ ಕ್ಷೇತ್ರದ ಆರ್‌ಎಂವಿ ಎರಡನೇ ಹಂತದಲ್ಲಿ ಮತಗಟ್ಟೆ ಸಂಖ್ಯೆ 2ರಲ್ಲಿ ಮತದಾನಕ್ಕೆ ತೆರಳಿದ್ದು, ಇವಿಎಂನಲ್ಲಿನ ಯಾವುದೇ ಗುಂಡಿ(ಬಟನ್) ಒತ್ತಿದರೂ ಅದು ಕಮಲಕ್ಕೆ ಹೋಗುತ್ತಿದೆ. ‘ಕಿವಿ ಮೇಲೆ ಕಮಲ’. ಇದರಿಂದ ನನ್ನ ಪೋಷಕರು ಸೇರಿ ಮತದಾರರು ಮತ ಹಾಕದೆ ವಾಪಸಾಗುತ್ತಿದ್ದಾರೆ’ ಎಂದು ಬ್ರಿಜೇಶ್ ಕಾಳಪ್ಪ ಟ್ವಿಟ್ ಮಾಡಿದ್ದಾರೆ.

ಬೆಳಗ್ಗೆಯೇ ಈ ಸಂಬಂಧ ಬ್ರಿಜೇಶ್ ಕಾಳಪ್ಪ ಟ್ವಿಟ್ ಮಾಡಿದ್ದು, ಇದು ವಾಟ್ಸಾಪ್, ಟ್ವೀಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಇವಿಎಂ ಮತ್ತು ವಿವಿಪ್ಯಾಟ್ ವಿಶ್ವಾಸಾರ್ಹತೆ ಬಗ್ಗೆ ಸಂದೇಶ ಸೃಷ್ಟಿಸಿದೆ.

ಇದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಇವಿಎ ಮತ್ತು ವಿವಿಪ್ಯಾಟ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದು ಮೇಲಿನ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಆದರೆ, ಈ ಬಗ್ಗೆ ಚುನಾವಣಾ ಆಯೋಗ ಏನು ಹೇಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.

ನಾಳೆಗೆ ಮುಂದೂಡಿಕೆ: ಹೆಬ್ಬಾಳ ಕ್ಷೇತ್ರದ ಆರ್‌ಎಂವಿ 2ನೆ ಹಂತದ ಬೂತ್ ಸಂಖ್ಯೆ-2ರಲ್ಲಿ ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ ಹೋಗುತ್ತಿದ್ದು, ಇದನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಬೇರೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಆ ಬೂತ್ ಚುನಾವಣೆ ನಾಳೆಗೆ (ಮೇ 13) ಮುಂದೂಡಲಾಗಿದೆ.

‘ಇವಿಎಂ ಮತಯಂತ್ರಗಳು ಸಂಪೂರ್ಣ ದೋಷಮುಕ್ತ. ಅದರ ಮೂಲಕ ಮೋಸ ಮಾಡಲು ಸಾಧ್ಯವಿಲ್ಲ ಎಂದಾದರೆ, ಹೆಬ್ಬಾಳ ಕ್ಷೇತ್ರದ ಆರ್‌ಎಂವಿ ಎರಡನೆ ಹಂತದ ಬೂತ್ 2ರಲ್ಲಿ ದೋಷ ಕಂಡುಬಂದಿದ್ದೇಕೆ? ಈ ಬಗ್ಗೆ ಚುನಾವಣಾಧಿಕಾರಿಗಳು ತನಿಖೆ ನಡೆಸಿ ಸತ್ಯಾಂಶ ಜನರ ಮುಂದಿಡಬೇಕೆಂದು ಎಸ್‌ಯುಸಿಐ ಆಗ್ರಹಿಸಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News