×
Ad

ಚುನಾವಣಾ ಅಕ್ರಮ ತಡೆಗಟ್ಟುವಲ್ಲಿ ಆಯೋಗ ವಿಫಲ: ಕುಮಾರಸ್ವಾಮಿ ಆರೋಪ

Update: 2018-05-12 19:00 IST

ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಫಲವಾಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಬೆಳಗ್ಗೆ ಕುಟುಂಬ ಸಮೇತ ವಿಜಯನಗರದಲ್ಲಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಹುತೇಕ ಎಲ್ಲ ಪಕ್ಷಗಳು ಹಣ ಹಂಚಿಕೆ ಮಾಡಿವೆ ಎಂದು ದೂರಿದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂ.ಪತ್ತೆಯಾಗಿದ್ದು, ಇದು ಯಾರ ಹಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದೇ ರೀತಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಹಣ ಹಂಚಿಕೆ ನಡೆದಿದೆ ಎಂದು ಆರೋಪಿಸಿದರು.

ಉತ್ತಮ ಸರಕಾರ ಆಯ್ಕೆ: ಮುಂದಿನ ಐದು ವರ್ಷಕ್ಕೆ ಉತ್ತಮ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ರಾಜ್ಯದ ಮತದಾರರ ಮೇಲಿದ್ದು, ಇಂದು ಆ ಜವಾಬ್ದಾರಿಯನ್ನು ನಿರ್ವಹಿಸುವ ಪ್ರಮುಖ ದಿನ. ತಾವು ಮತದಾನ ಮಾಡುವ ಮುನ್ನ ಶ್ರೀಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೆ ಎಂದರು.

ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಂಡು ಉತ್ತಮ ಆಡಳಿತ ಮಾಡುವ ಪಕ್ಷ ಹಾಗೂ ಸರಕಾರವನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ ಅವರು, ತನ್ನ ಆರೋಗ್ಯವನ್ನೂ ಲೆಕ್ಕಿಸದೆ ಈ ಚುನಾವಣೆಯಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಅದಕ್ಕೆ ಶಕ್ತಿ ತುಂಬಬೇಕೆಂದು ಕೋರಿದರು.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ರೀತಿಯಲ್ಲೆ ರಾಜ್ಯದ 20ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹದ ಪ್ರಕರಣಗಳು ನಡೆದಿವೆ. ಇದರಲ್ಲಿ ರಾಜ್ಯದ ಆಡಳಿತಾರೂಢ ಸರಕಾರ ಭಾಗಿಯಾಗಿದ್ದು, ಇದನ್ನು ಬಹಿರಂಗಪಡಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದರು.

ಬಿಜೆಪಿ ಬಿಟ್ಟಿದ್ದೇಕೆ?: ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವ ಸಂದರ್ಭದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ದಾಳಿ ಬಿಜೆಪಿ ಅಭ್ಯರ್ಥಿಗಳನ್ನು ಬಿಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ನಡೆಸಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News