ಮೊದಲ ಬಾರಿಗೆ ಮತ ಚಲಾಯಿಸಿದವರ ಮನದಾಳದ ಮಾತುಗಳು

Update: 2018-05-12 14:29 GMT

ಬೆಂಗಳೂರು, ಮೇ 12: ಮತದಾನ ಮಾಡುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಉತ್ತಮ ಸರಕಾರ ನಿರ್ಮಾಣವಾಗುತ್ತದೆ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತ ಚಲಾವಣೆ ಮಾಡಿದ ತನುಶ್ರೀ ಅಭಿಪ್ರಾಯಪಟ್ಟರು.

ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಡಿಪ್ಲೊಮಾ ಅಭ್ಯಾಸ ಮಾಡುತ್ತಿರುವ ನಾನು ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಹಕ್ಕನ್ನು ಚಲಾಯಿಸುವ ಹಕ್ಕಿದೆ. ಹೀಗಾಗಿ, ನಾನು ನನ್ನ ಹಕ್ಕನ್ನು ಅರ್ಹ ಹಾಗೂ ಉತ್ತಮ ಅಭ್ಯರ್ಥಿಗೆ ಚಲಾಯಿಸಿದ್ದೇನೆ. ಈ ಮೂಲಕ ಸಮರ್ಥ ಸರಕಾರ ರಚನೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಹಣ, ಹೆಂಡ ಮುಂತಾದ ಆಮಿಷಗಳನ್ನೊಡ್ಡಿ ಚುನಾವಣೆಯಲ್ಲಿ ಮತ ಪಡೆಯಲು ಜನಪ್ರತಿನಿಧಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅದರ ಪರಿಹಾರಕ್ಕೆ ಸಮಗ್ರವಾದ ದೂರದೃಷ್ಟಿಯುಳ್ಳ ವ್ಯಕ್ತಿಗಳಿಗೆ ಮತ ಚಲಾಯಿಸಬೇಕು ಎಂದು ತೀರ್ಮಾನ ಮಾಡಿಕೊಂಡು ಬಂದಿದ್ದೆ. ಅಲ್ಲದೆ, ಸದಾ ಜನಪರ ಕಾಳಜಿಯುಳ್ಳ ಹಾಗೂ ಸಾಮಾನ್ಯ ಜನರ ನಡುವೆ ಇರುವ ವ್ಯಕ್ತಿಗೆ ನಾನು ಮತ ಹಾಕಿದ್ದೇನೆ ಎಂದು ದೊಡ್ಡಬಳ್ಳಾಪುರದ ವಿದ್ಯಾರ್ಥಿ ಸತೀಶ್ ತಿಳಿಸಿದರು.

ಮೊದಲ ಬಾರಿಗೆ ಮತಗಟ್ಟೆ ನೋಡುತ್ತಿದ್ದೇನೆ. ಪಿಂಕ್ ಮತಗಟ್ಟೆ ಹೆಸರಿನಲ್ಲಿ ತುಂಬಾ ಆಕರ್ಷಣೀಯವಾಗಿ ಸಿಂಗಾರ ಮಾಡಿದ್ದು ಖುಷಿ ತಂದಿತು. ಈ ಬಾರಿ ನಾನು ಅಭಿವೃದ್ಧಿಯಲ್ಲಿ ಯಾವುದೇ ಭೇದ-ಭಾವ ತೋರದೆ ಎಲ್ಲರಿಗೂ ಸಮಾನ ನ್ಯಾಯ ಕಲ್ಪಿಸುತ್ತಾರೆ ಎಂಬ ನಂಬಿಕೆ ಹಾಗೂ ವಿಶ್ವಾಸ ಮೂಡಿಸಿರುವಂತಹ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಉತ್ತಮ ನಾಯಕತ್ವ ಗುಣಗಳಿರುವ ಹಾಗೂ ಉತ್ತಮ ಆಡಳಿತ ನಡೆಸಲು ಸಾಮರ್ಥ್ಯವುಳ್ಳ ವ್ಯಕ್ತಿಗೆ ನನ್ನ ಮತ ಚಲಾಯಿಸಿದ್ದೇನೆ ಎಂಬ ನೆಮ್ಮದಿಯಿದೆ ಎಂದು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ರಂಜನಿ ಅಭಿಪ್ರಾಯ ಹಂಚಿಕೊಂಚರು.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಯುವಕ ಅಶೋಕ್ ಮೊದಲ ಬಾರಿಗೆ ಮತ ಚಲಾಯಿಸಿ ನಂತರ ಮಾತನಾಡಿ, ಬಡವರ ಸಮಸ್ಯೆಗಳನ್ನು ಆಲಿಸುವ, ಶ್ರಮಿಕ ವರ್ಗದ ಬಗ್ಗೆ ಕಾಳಜಿಯುಳ್ಳ ಜನಪ್ರತಿನಿಧಿಗಳ ಅಗತ್ಯವಿದೆ. ಚುನಾವಣೆಗಳ ಸಂದರ್ಭದಲ್ಲಿ ಭಾಷಣ ಮಾಡಿ, ಭರವಸೆಗಳನ್ನು ನೀಡಿ ಹೋಗುವವರ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಮೊದಲ ಮತವನ್ನು ಶ್ರಮಿಕರು, ಕಾರ್ಮಿಕರ ಪರವಾದ ಅಭ್ಯರ್ಥಿಗೆ ಚಲಾಯಿಸಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News