ಬೆಂಗಳೂರು: ಹಲವು ಕಡೆ ವಿವಿ ಪ್ಯಾಟ್ ಸಮಸ್ಯೆ

Update: 2018-05-12 14:48 GMT

ಬೆಂಗಳೂರು, ಮೇ 12: ಬೆಂಗಳೂರು ನಗರದ 26 ಕ್ಷೇತ್ರಗಳಲ್ಲಿ ನಡೆದ ಮತದಾನದ ವೇಳೆ ಕೆಲವೆಡೆ ವಿವಿ ಪ್ಯಾಟ್ ದೋಷ, ಸಣ್ಣಪುಟ್ಟ ಗಲಾಟೆ ಹಾಗೂ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಕಣ್ಮರೆಯಾಗಿರುವುದು...

ಹೀಗೆ ಹಲವು ಸಮಸ್ಯೆಗಳ ಕಾರಣದಿಂದಾಗಿ ಬೆಂಗಳೂರಿನ ಮತದಾನದ ಪ್ರಮಾಣವು ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಹೆಬ್ಬಾಳ ಕ್ಷೇತ್ರದ ವಾರ್ಡ್ ನಂ.18 ರಾಧಾಕೃಷ್ಣನಗರದ ಲೊಟ್ಟೆಗೊಲ್ಲನಹಳ್ಳಿ ಮತಗಟ್ಟೆ ಸಂಖ್ಯೆ 2ರಲ್ಲಿ ವಿವಿ ಪ್ಯಾಟ್ ಸಮಸ್ಯೆಯಿಂದಾಗಿ ಬೆಳಗ್ಗೆಯಿಂದ ಸಂಜೆವರೆಗೆ ಒಂದು ಮತದಾನವು ನಡೆದಿಲ್ಲ. ಸುಮಾರು 600ಮಂದಿ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸದೆ ವಾಪಸ್ ಹೋದ ಘಟನೆ ನಡೆದಿದೆ.

ಈ ವೇಳೆ ಮತದಾರರೊಬ್ಬರು ಮಾತನಾಡಿ, ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಮತದಾನ ಮಾಡಲು ತುದಿಗಾಲಲ್ಲಿ ನಿಂತಿದ್ದೆವು. ಆದರೆ, ಬೆಳಗ್ಗೆ 7ಗಂಟೆಯಿಂದ ಸಂಜೆವರೆಗೂ ಕಾದರೂ ವಿವಿ ಪ್ಯಾಟ್ ಯಂತ್ರ ಸರಿಯಾಗಲಿಲ್ಲ. ಈಗ ನಿರಾಸೆಯಿಂದಲೆ ಮನೆಗೆ ಹೋಗುತ್ತಿದ್ದೇನೆ ಎಂದು ವಿಷಾದಿಸಿದರು.

ಇನ್ನು ಕೆ.ಆರ್.ಪುರಂನಲ್ಲಿ ಸುಮಾರು 400ಮಂದಿಯ ಬಳಿ ಮತದಾನದ ಗುರುತಿನ ಚೀಟಿಯಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನದಿಂದ ವಂಚಿತರಾದರು. ಈ ಸಂಬಂಧ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ. ತಮ್ಮ ಹೆಸರಿನ ಬದಲಿಗೆ ಅಕ್ರಮವಾಗಿ ಬೇರೆಯವರ ಹೆಸರನ್ನು ಸೇರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News