ಬೆಂಗಳೂರು: ಪ್ರಥಮ ಬಾರಿಗೆ ಮಂಗಳಮುಖಿಯರಿಂದ ಮತದಾನ

Update: 2018-05-12 14:50 GMT

ಬೆಂಗಳೂರು, ಮೇ 12: ತೃತೀಯ ಲಿಂಗಿಗಳು ತಮ್ಮ ಮತದಾನದ ಹಕ್ಕಿಗಾಗಿ ಸತತ 16ವರ್ಷಗಳ ಕಾಲ ನಡೆಸಿದ ಹೋರಾಟದ ಫಲವಾಗಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ.

ಶನಿವಾರ ಸಿವಿ ರಾಮನ್‌ನಗರ ಮತಗಟ್ಟೆ ಸಂಖ್ಯೆ 161ಕ್ಕೆ ತೆರಳಿದ ಲೈಂಗಿಕ ಅಲ್ಪಸಂಖ್ಯಾತ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ಸೇರಿದಂತೆ ಹಲವರು ಮತದಾನ ಮಾಡಿದರು.

ಮತದಾನ ಮಾಡಿದ ನಂತರ ಮಾತನಾಡಿದ ಅವರು, ತಮ್ಮ 16 ವರ್ಷಗಳ ಸತತ ಹೋರಾಟಕ್ಕೆ ಫಲ ಸಂದಿದ್ದು, ಇದೇ ಮೊದಲ ಬಾರಿಗೆ ತಾವು ತಮ್ಮ ಹಕ್ಕನ್ನು ಚಲಾಯಿಸಿದ್ದೇನೆ. ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜ್ಞಾವಂತ ಪ್ರಜೆಯಾಗಿ ಎಂದು ಕರೆ ನೀಡಿದ್ದಾರೆ.

ಸಿವಿ ರಾಮನ್‌ನಗರ ಮತಗಟ್ಟೆಯಲ್ಲಿ ಮಂಗಳಮುಖಿಯರಾದ ಜಂಕಿ ಸೇರಿದಂತೆ ಮತಗಟ್ಟೆ 161 ರಲ್ಲಿ 35ಕ್ಕೂ ಹೆಚ್ಚು ತೃತೀಯಲಿಂಗಿಗಳು ಮತಗಟ್ಟೆ ಬಳಿ ಜಮಾಯಿಸಿ ಮತ ಚಲಾಯಿಸಿ ಸಂಭ್ರಮ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿ ನಾವೆಲ್ಲರೂ ಮತದಾನದ ಹಕ್ಕು ಚಲಾಯಿಸಿದ್ದು, ಇದು ನಮ್ಮ ಹಕ್ಕುನ್ನು ಚಲಾಯಿಸಿದ ಸಂತಸದ ಕ್ಷಣಗಳಾಗಿವೆ. ಪ್ರತಿಯೊಬ್ಬ ಮತದಾರನೂ ಕೂಡ ತಮ್ಮ ಹಕ್ಕನ್ನು ಚಲಾಯಿಸುವ ನಿಟ್ಟಿನಲ್ಲಿ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News