ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಫಲಿತಾಂಶಕ್ಕೆ ತಡೆ
ಬೆಂಗಳೂರು, ಮೇ 15: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಹೆಚ್ಚಿನ ಮತಗಳನ್ನು ವಿವಿಪ್ಯಾಟ್‌ನಲ್ಲಿ ತೋರಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಪ್ರಕಟಿಸಲು ತಡೆ ನೀಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮತ ಕ್ಷೇತ್ರದ ಮತಗಟ್ಟೆ ಸಂಖ್ಯೆ 152(ಎ)ನಲ್ಲಿ ಇವಿಎಂನಲ್ಲಿ ಚಲಾವಣೆಯಾದ ಮತಗಳಿಗಿಂತ ವಿವಿಪ್ಯಾಟ್‌ನಲ್ಲಿ 207 ಹೆಚ್ಚುವರಿ ಮತಗಳನ್ನು ತೋರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹೇಶ್ ನಾಲವಾಡ ಚುನಾವಣಾ ಫಲಿತಾಂಶ ಪ್ರಕಟಿಸದಂತೆ ಮನವಿ ಮಾಡಿದ್ದಾರೆ.
ಬ್ಯಾಲೆಟ್ ಪೇಪರ್ ಮೂಲಕ ಮರು ಮತದಾನ ನಡೆಸುವಂತೆ ಅವರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಪ್ರಕಟ ಮಾಡದೆ ತಡೆ ಹಿಡಿಯುವಂತೆ ಚುನಾವಣಾಧಿಕಾರಿ ಮೌಖಿಕ ಸೂಚನೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗದೊಂದಿಗೆ ಚುನಾವಣಾಧಿಕಾರಿ ಚರ್ಚೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಬಿಜೆಪಿಯ ಪ್ರಮುಖ ಅಭ್ಯರ್ಥಿ ಜಗದೀಶ್ ಶೆಟ್ಟರ್ ಫಲಿತಾಂಶವನ್ನು ತಡೆಹಿಡಿಯಲಾಗಿದ್ದು, ಬಿಜೆಪಿ ಸ್ಥಾನ 103ಕ್ಕೆ ಕುಸಿದಿದೆ.