ಮೋದಿ ಸರಕಾರದ ಮುದ್ರಾ ಯೋಜನೆಯಿಂದ ವಾಸ್ತವದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ?

Update: 2018-05-17 18:31 GMT

ಈ ಯೋಜನೆಯಡಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬ ಬಗ್ಗೆ ಅಧಿಕೃತ ಅಂಕಿಅಂಶ ಲಭ್ಯವಿಲ್ಲದಿದ್ದರೂ ಸಾಲದ ಫಲಾನುಭವಿಗಳ ಸಂಖ್ಯೆಯನ್ನೇ ಉದ್ಯೋಗ ಸೃಷ್ಟಿ ಎಂದು ಲೆಕ್ಕ ಹಾಕಲಾಗುತ್ತಿದೆ.


ವಾರ್ಷಿಕ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ತನ್ನ ಚುನಾವಣಾ ಸಂದರ್ಭದ ಭರವಸೆಯನ್ನು ಈಡೇರಿಸಲು ಪರದಾಡುತ್ತಿರುವ ಮೋದಿ ಸರಕಾರ ಮತ್ತು ಬಿಜೆಪಿಗೆ 2015ರಲ್ಲಿ ಜಾರಿಗೆ ತರಲಾಗಿರುವ ಸ್ವಉದ್ಯೋಗ ಯೋಜನೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಒಂದಷ್ಟು ಮುಖ ಮುಚ್ಚಿಕೊಳ್ಳಲು ಅವಕಾಶವನ್ನು ನೀಡಬಹುದು. ಆದರೆ ಯೋಜನೆ ಜಾರಿಯಾದ ಮೂರು ವರ್ಷಗಳ ನಂತರವೂ ಈ ಯೋಜನೆಯಡಿ ಹೇಳಿಕೊಳ್ಳುವಷ್ಟು ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ.

ಈ ಯೋಜನೆಯಡಿ ನೀಡಲಾಗಿರುವ ಒಟ್ಟು ಸಾಲಗಳ ಪೈಕಿ ನಿಜವಾಗಿಯೂ ಉದ್ಯೋಗವನ್ನು ಸೃಷ್ಟಿಸಬಹುದಾದಷ್ಟು ಅಂದರೆ ಐದು ಲಕ್ಷಕ್ಕೂ ಅಧಿಕ ಸಾಲಗಳ ಪ್ರಮಾಣ ಬಹಳ ಕಡಿಮೆ ಅಥವಾ ಕೇವಲ ಶೇ.1.3 ಮಾತ್ರ ಎಂದು ಮಾಹಿತಿ ಹಕ್ಕಿನಡಿ ಪಡೆಯಲಾದ ಮಾಹಿತಿ ತಿಳಿಸುತ್ತದೆ. ಉಳಿದ ಸಾಲಗಳು 50,000 ರೂ.ಗಿಂತ ಕಡಿಮೆ ಮತ್ತು 50,000 ರೂ. ಹಾಗೂ ಐದು ಲಕ್ಷ ರೂ. ಮಧ್ಯೆ ಇವೆ. ದಿಲ್ಲಿ ಮೂಲದ ಮಾಹಿತಿ ಹಕ್ಕುಗಳ ಕಾರ್ಯಕರ್ತ ಚಂದನ್ ಕಾಮ್ಹೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ವಿತ್ತ ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ಸೇವಾ ವಿಭಾಗವು ಈ ಅಂಕಿಅಂಶಗಳನ್ನು ನೀಡಿದೆ. 2017-18ರಲ್ಲಿ ಮುದ್ರಾ ಯೋಜನೆಯಡಿ 4.81 ಕೋಟಿ ಫಲಾನುಭವಿಗಳಿಗೆ 2,53,677.10 ಕೋಟಿ ರೂ. ಸಾಲವನ್ನು ನೀಡಲಾಗಿದೆ. ಅಂದರೆ ಪ್ರತಿಯೊಬ್ಬನಿಗೆ ತಲಾ 52,700 ರೂ. ನೀಡಿದಂತಾಗುತ್ತದೆ. ಇಷ್ಟು ಸಣ್ಣ ಮೊತ್ತದಿಂದ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವುಳ್ಳಂಥ ಯಾವುದೇ ಉದ್ದಿಮೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಈ ಮೊತ್ತವು ಮುದ್ರಾ ಯೋಜನೆಯ ಫಲಾನುಭವಿಗಳನ್ನು ಉದ್ಯೋಗಿಗಳೆಂದು ಲೆಕ್ಕ ಹಾಕುವ ಸರಕಾರದ ವಾದಕ್ಕೆ ಕೊಡಲಿಯೇಟು ನೀಡುತ್ತದೆ.

ಈ ಯೋಜನೆಯು ದಲಿತ ಮಹಿಳಾ ಉದ್ಯಮಿಗಳು ಉದ್ದಿಮೆ ಸ್ಥಾಪಿಸಲು ಅಗತ್ಯವಿರುವ ಆರಂಭಿಕ ಬಂಡವಾಳವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. 2018ರ ಮೇ ಮೂರರವರೆಗೆ 12.61 ಕೋಟಿ ಮುದ್ರಾ ಸಾಲಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ಐದು ಲಕ್ಷ ರೂ.ಗಿಂತ ಹೆಚ್ಚು ಮಂಜೂರಾಗಿರುವ ಸಾಲಗಳ ಸಂಖ್ಯೆ ಕೇವಲ 17.57 ಲಕ್ಷ. ಬ್ಯಾಂಕ್‌ಗಳು ಮತ್ತು ಸಣ್ಣ ಆರ್ಥಿಕ ಸಂಸ್ಥೆಗಳು ನೀಡುವ ಮುದ್ರಾ ಸಾಲದ ಪ್ರಮಾಣ ಕ್ರಮವಾಗಿ ಶೇ.65 ಮತ್ತು ಶೇ.35 ಮಾತ್ರ. 2015-16ರಲ್ಲಿ 1,32,954 ರೂ. ಇದ್ದ ಸಾಲದ ಪ್ರಮಾಣ 2017-18ರಲ್ಲಿ ಶೇ. 85 ಏರಿಕೆ ಕಂಡು 2,46,437 ರೂ. ತಲುಪಿತ್ತು.

2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮೋದಿ ಉದ್ಯೋಗವನ್ನು ಸೃಷ್ಟಿಸುವ ಭರವಸೆಯನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ತಮ್ಮ ಮಾತು ಬದಲಿಸಿದ ಮೋದಿ ತಾನು ಉದ್ಯೋಗ ಹುಡುಕುವ ಯುವಕರನ್ನು ಉದ್ಯೋಗ ಸೃಷ್ಟಿಕರ್ತರನ್ನಾಗಿ ಬದಲಿಸಲು ಬಯಸುತ್ತೇನೆ ಎಂದು ತಿಳಿಸಿದ್ದರು. ಆದರೆ ಆರ್ಥಶಾಸ್ತ್ರಜ್ಞರ ಪ್ರಕಾರ, ಬಹುತೇಕ ಸ್ವದ್ಯೋಗ ಹೊಂದಿರುವ ಜನರಿಗೆ ಪೂರ್ಣಕಾಲಿಕ ಉದ್ಯೋಗವಿರುವುದಿಲ್ಲ. ಹಾಗಾಗಿ ಅವರು ಅರೆಉದ್ಯೋಗಿಗಳೂ ಆಗಿರಬಹುದು. 50,000 ರೂ. ಸಾಲದಿಂದ ವ್ಯಕ್ತಿಯೊಬ್ಬ ತನಗೇ ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗಿರುವಾಗ ಇತರರಿಗೆ ಉದ್ಯೋಗ ನೀಡುವುದು ಕನಸಿನ ಮಾತು ಎಂದು ಹೇಳುತ್ತಾರೆ ಕಾರ್ಮಿಕ ಅರ್ಥಶಾಸ್ತ್ರಜ್ಞ ಸಂತೋಷ್ ಕುಮಾರ್ ಮೆಹ್ರೋತ್ರಾ. ಈ ಸಾಲಗಳನ್ನು ಯಾವುದೇ ಪರ್ಯಾಯ ಭದ್ರತೆ ಇಲ್ಲದೆ ನೀಡಲಾಗುವುದರಿಂದ ಇದು ಅಪಾಯದಿಂದ ಕೂಡಿದ ಸಾಲವೂ ಆಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಆದರೆ ಈ ಎಲ್ಲ ಟೀಕೆಗಳಿಂದ ವಿಚಲಿತರಾಗದ ಮೋದಿ ಸರಕಾರ ಮತ್ತು ಬಿಜೆಪಿ ತಮ್ಮ ವಾದವನ್ನು ಸಮರ್ಥಿಸಲು ಮುದ್ರಾ ಯೋಜನೆಯ ಯಶಸ್ಸನ್ನು ಹಾಡಿಹೊಗಳುತ್ತಿದೆ.

ಈ ಯೋಜನೆಯಡಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬ ಬಗ್ಗೆ ಅಧಿಕೃತ ಅಂಕಿಅಂಶ ಲಭ್ಯವಿಲ್ಲದಿದ್ದರೂ ಸಾಲದ ಫಲಾನುಭವಿಗಳ ಸಂಖ್ಯೆಯನ್ನೇ ಉದ್ಯೋಗ ಸೃಷ್ಟಿ ಎಂದು ಲೆಕ್ಕಹಾಕಲಾಗುತ್ತಿದೆ. ಉದಾಹರಣೆಗೆ, ಎನ್‌ಡಿಎ ಸರಕಾರದಡಿ ನಡೆದಿರುವ ಉದ್ಯೋಗರಹಿತ ಅಭಿವೃದ್ಧಿಯ ಬಗ್ಗೆ ಅರ್ಥಶಾಸ್ತ್ರಜ್ಞರ ಟೀಕೆಗೆ ಉತ್ತರಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಭಾರತದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕೇವಲ ಉದ್ಯೋಗದಿಂದ ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಮುದ್ರಾ ಯೋಜನೆಯಡಿ 7.28 ಕೋಟಿ ಜನರು ಸ್ವಉದ್ಯೋಗಿಗಳಾಗಿದ್ದಾರೆ ಎಂದು ತಿಳಿಸಿದ್ದರು. ಈ ಸಂಖ್ಯೆ ಬಂದದ್ದಾದರೂ ಎಲ್ಲಿಂದ?

ಈ 7.28 ಕೋಟಿಯು ಅಮಿತ್ ಶಾ ಕಳೆದ ಜುಲೈಯಲ್ಲಿ ತಮ್ಮ ಅಂಕಿಅಂಶವನ್ನು ತೆರೆದಿಟ್ಟ ಸಮಯದಲ್ಲಿ ಮುದ್ರಾ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳ ಸಂಖ್ಯೆಯಾಗಿದೆ. ‘‘ಉದ್ಯೋಗಗಳು ಎಲ್ಲಿವೆ ಎಂದು ಪ್ರಶ್ನಿಸುತ್ತಾ ಉದ್ಯೋಗರಹಿತ ಅಭಿವೃದ್ಧಿಯನ್ನು ಟೀಕಿಸುವ ಮೂಲಕ ಆರ್ಥಿಕ ತಜ್ಞರು ನನ್ನ ತಲೆಯಲ್ಲಿರುವ ನಾಲ್ಕು ಕೂದಲನ್ನೂ ಕೀಳಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅಮಿತ್ ಶಾ, ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತ ‘ದಿ ಮೇಕಿಂಗ್ ಆಫ್ ಲೆಜೆಂಡ್’ ಎಂಬ ಪುಸ್ತಕದ ಬಿಡುಗಡೆ ಸಮಾರಂಭದ ವೇಳೆ ವ್ಯಂಗ್ಯವಾಡಿದ್ದರು. ಈ ಸಮಾರಂಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಹಾಗೂ ಇತರರು ಭಾಗವಹಿಸಿದ್ದರು. ಸ್ಕೋಚ್ ಗ್ರೂಪ್ ಕಳೆದ ಸೆಪ್ಟಂಬರ್‌ನಲ್ಲಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಮುದ್ರಾ ಯೋಜನೆ 5.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಿದ್ದರೆ ಹೆಚ್ಚುವರಿ ಉದ್ಯೋಗಗಳ ಸಂಖ್ಯೆ ಕೇವಲ 1.7 ಕೋಟಿಯಾಗಿದೆ. ಹೆಚ್ಚುವರಿ ಉದ್ಯೋಗಗಳೆಂದರೆ ಏನು?

ಇದರರ್ಥ, ಮುದ್ರಾ ಯೋಜನೆಯನ್ನು ಜಾರಿಗೆ ತರದಿದ್ದರೆ ಈ ಉದ್ಯೋಗಗಳು ಸೃಷ್ಟಿಯಾಗುತ್ತಿರಲಿಲ್ಲ. ‘‘ನಮ್ಮ ಅಧ್ಯಯನದ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಮುದ್ರಾ ಯೋಜನೆಯಿಂದ ಸೃಷ್ಟಿಯಾಗಿರುವ ಹೆಚ್ಚುವರಿ ಉದ್ಯೋಗಗಳ ಪ್ರಮಾಣ 1.17 ಕೋಟಿ. ಇದರಿಂದ 0.52 ಕೋಟಿ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಎರಡು ವರ್ಷಗಳಲ್ಲಿ ಸೃಷ್ಟಿಯಾಗಿರುವ ಒಟ್ಟಾರೆ ಹೆಚ್ಚುವರಿ ಉದ್ಯೋಗಗಳ ಸಂಖ್ಯೆ 1.68 ಕೋಟಿ ಎಂದು ಹೇಳುತ್ತಾರೆ’’ ಸ್ಕೋಚ್ ಗ್ರೂಪ್‌ನ ಮುಖ್ಯಸ್ಥ ಮತ್ತು ಈ ವರದಿಯನ್ನು ಸಿದ್ಧಪಡಿಸಿರುವ ಸಮೀರ್ ಕೊಚರ್.

ಅಪಾಯಕಾರಿ ಸಾಲ ಮತ್ತು ಮಹಿಳಾ ಉದ್ಯಮಿಗಳು

ಎರಡು ಅಂಶಗಳು ಈ ಎರಡು ವರ್ಷಗಳಲ್ಲಿ ಮುದ್ರಾ ಸಾಲ ನೀಡುವಿಕೆಯ ಪ್ರಮಾಣದಲ್ಲಿ ಇಳಿಕೆಯಾಗುವಂತೆ ಮಾಡಿದೆ. ಮೊದಲನೆಯದಾಗಿ, ಈ ಸಾಲಕ್ಕೆ ಬ್ಯಾಂಕ್‌ಗಳು ಯಾವುದೇ ಪರ್ಯಾಯ ಭದ್ರತೆಯನ್ನು ಪಡೆಯಲು ಸಾಧ್ಯವಿಲ್ಲ ದಿರುವುದರಿಂದ ಒಂದು ವೇಳೆ ಸಾಲ ಮರುಪಾವತಿಯಾಗದಿದ್ದರೆ ಅದನ್ನು ಪಡೆಯಲು ಬ್ಯಾಂಕ್‌ಗಳು ಹೆಚ್ಚೇನೂ ಮಾಡುವಂತಿಲ್ಲ. ಮುದ್ರಾ ಸಾಲಗಳು ಹೆಚ್ಚಿನ ಪ್ರಮಾಣಲ್ಲಿ ಮರುಪಾವತಿಯಾಗದೆ ಹೋದರೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ನಿರ್ವಹಣಾರಹಿತ ಆಸ್ತಿ (ಎನ್‌ಪಿಎ) ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಬ್ಯಾಂಕಿಂಗ್ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ. ಈಗಾಗಲೇ ಬ್ಯಾಂಕಿಂಗ್ ಕ್ಷೇತ್ರದ ಎನ್‌ಪಿಎ ಮಟ್ಟವು ಆಘಾತಕಾರಿ 9 ಲಕ್ಷ ಕೋಟಿ ರೂ. ತಲುಪಿದೆ. ‘‘ಮುದ್ರಾ ಯೋಜನೆಯ ಪ್ರಮುಖ ಗುರಿ ಮಹಿಳಾ ಉದ್ಯಮಿ ಗಳಾಗಿದ್ದಾರೆ. ಆದರೆ ಮಹಿಳೆಯರಲ್ಲಿ ಈ ಸಾಲದ ಬಗ್ಗೆ ಆಕರ್ಷಣೆಯಿಲ್ಲ ದಿರುವುದರಿಂದ ಮುದ್ರಾ ಸಾಲ ಉದ್ದೇಶಿತ ಗುರಿಯನ್ನು ತಲುಪುವಲ್ಲಿ ವಿಫಲವಾಗಿದೆ.

ಅದರ ಬದಲು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಈಗಾಗಲೇ ಇರುವ ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲವನ್ನು ನೀಡುವುದು ಉತ್ತಮ ಯೋಚನೆಯಾಗಿದೆ’’ ಎಂದು ಮೆಹ್ರೋತ್ರಾ ತಿಳಿಸುತ್ತಾರೆ. ಜನವರಿಯಲ್ಲಿ ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ನೀಡಿರುವ ಮಾಹಿತಿ ಪ್ರಕಾರ, 2015-16ರ ಸಾಲಿನಲ್ಲಿ ನೀಡಲಾದ 3.5 ಕೋಟಿ ಮುದ್ರಾ ಸಾಲಗಳ ಪೈಕಿ ಮಹಿಳಾ ಫಲಾನುಭವಿಗಳ ಸಂಖ್ಯೆ 2.76 ಕೋಟಿ ಅಥವಾ ಶೇ.79 ಆಗಿದ್ದರೆ 2016-17ರಲ್ಲಿ ಈ ಪ್ರಮಾಣವು ಕುಸಿದು, ನೀಡಲಾದ 3.97 ಕೋಟಿ ಮುದ್ರಾ ಸಾಲಗಳ ಪೈಕಿ 2.9 ಕೋಟಿ ಅಥವಾ ಶೇ.73ಕ್ಕೆ ತಲುಪಿದೆ ಎಂದು ತಿಳಿಸಿದ್ದರು. ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ಯಮ ಕಾರ್ಯಕ್ರಮದಡಿ ಮಹಿಳೆಯರಿಗೆ ನೀಡಲಾಗುವ ಸಾಲಕ್ಕೆ 25 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿಯನ್ನು ನೀಡಲಾಗುತ್ತದೆ. ಇದೇ ವೇಳೆ, ಮೋದಿ ಸರಕಾರ ಮುದ್ರಾ ಯೋಜನೆಯ ಫಲಾನುಭವಿ ಗಳನ್ನು ಉದ್ಯೋಗಿಗಳು ಎಂದು ಪರಿಗಣಿಸಲು ಮುಂದಾಗಿದೆ. ಇದರಿಂದ ಉದ್ಯೋಗ ಹೊಂದಿರುವ ಜನರ ಸಂಖ್ಯೆಯಲ್ಲಿ ಶೇ. 10 ಏರಿಕೆ ಕಂಡುಬರಬಹುದು. ಈ ಪ್ರಸ್ತಾವವನ್ನು ಕಾರ್ಮಿಕ ಸಚಿವಾಲಯ ಮುಂದಿಟ್ಟಿದೆ.

ಕೃಪೆ:  thewire.in

Writer - ನೂರ್ ಮುಹಮ್ಮದ್

contributor

Editor - ನೂರ್ ಮುಹಮ್ಮದ್

contributor

Similar News