×
Ad

ಬಿಜೆಪಿಯಿಂದ ಆನಂದ್ ಸಿಂಗ್ ಅಪಹರಣ: ಸಿದ್ದರಾಮಯ್ಯ ಆರೋಪ

Update: 2018-05-18 17:49 IST

ಬೆಂಗಳೂರು, ಮೇ 18: ಕಾಂಗ್ರೆಸ್ ಶಾಸಕ ಆನಂದ್‌ ಸಿಂಗ್‌ರನ್ನು ಬಿಜೆಪಿ ಅಪಹರಣ ಮಾಡಿರುವುದು ಸ್ಪಷ್ಟವಾಗಿದ್ದು, ಅಕ್ರಮ ಬಂಧನದಲ್ಲಿಟ್ಟಿದ್ದಾರೆ. ಆದರೂ ಅವರು ನಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರಾದ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಯಾವ, ಯಾವ ಶಾಸಕರ ಬಳಿ ಏನೇನು ಮಾತನಾಡಿದ್ದಾರೆ ಎಂಬ ಮಾಹಿತಿ ನಮ್ಮ ಬಳಿ ಇವೆ. ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ರಾಜ್ಯಪಾಲರು ಅಸಂವಿಧಾನಕವಾಗಿ ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಮಾನಗಳನ್ನು ಉಲ್ಲಂಘಿಸಿ ಬಿಜೆಪಿಗೆ ಸರಕಾರ ರಚಿಸಲು ಅನುಮತಿ ಕೊಟ್ಟಿದ್ದಾರೆ. ಅದರಲ್ಲೂ ಬಹುಮತ ಸಾಬೀತು ಪಡಿಸಲು 15 ದಿನ ಕಾಲಾವಕಾಶ ಕೊಟ್ಟಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರೆ ಮೂಲ ಕಾರಣವೆಂದು ಅವರು ಆಪಾದಿಸಿದರು.

ಮೇ 15ರಂದು ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ರಾಜ್ಯಪಾಲರನ್ನು ಭೇಟಿ ನೀಡಿ ಕಾಂಗ್ರೆಸ್, ಜೆಡಿಎಸ್ ಒಟ್ಟು ಶಾಸಕರ ಸಂಖ್ಯೆ 117 ಬಂದಿದೆ. ನಮಗೆ ಅಧಿಕಾರ ನಡೆಸಲು ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದೆವು. ಆದರೆ, ರಾಜ್ಯಪಾಲರು ಬಹುಮತವೆ ಇಲ್ಲದ ಬಿಜೆಪಿಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದಂತೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮಾತನಾಡಿ, ಈ ಹಿಂದೆ ಗೋವಾ, ಮೇಘಾಲಯ, ಮಣಿಪುರದ ರಾಜ್ಯಪಾಲರು ಕೈಗೊಂಡ ತೀರ್ಮಾನದಂತೆ ರಾಜ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದೆವು. ಆದರೆ, ರಾಜ್ಯಪಾಲ ವಜೂಭಾಯಿ ವಾಲಾ ಸಂವಿಧಾನಕ್ಕೆ ವಿರುದ್ಧವಾಗಿ ಬಹುಮತವೆ ಇಲ್ಲದ ಬಿಜೆಪಿಗೆ ಸರಕಾರ ರಚಿಸಲು ಅನುಮತಿ ಕೊಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಇಟ್ಟಿದ್ದಾರೆ ಎಂದು ದೂಷಿಸಿದರು.

ಬಿಜೆಪಿಗೆ ಸುಪ್ರೀಂ ಕಪಾಳ ಮೋಕ್ಷ
ನರೇಂದ್ರ ಮೋದಿ ಮತ್ತು ಅಮಿತ್ ಶಾ ಈ ದೇಶದಲ್ಲಿರುವ ಹಿಟ್ಲರ್‌ನ ಪಳೆಯುಳಿಕೆಗಳು. ಅವರಿಗೆ ಈ ದೇಶದ ಬಗ್ಗೆ, ಸಂವಿಧಾನದ ಬಗ್ಗೆ ಗೌರವವಿಲ್ಲ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ. ಈಗಾಗಲೇ ಸಂವಿಧಾನದ ಆಶಯವನ್ನು ಉಲ್ಲಂಘಿಸಲು ಮುಂದಾದವರಿಗೆ ಸುಪ್ರಿಂಕೋರ್ಟ್ ಕಪಾಳಮೋಕ್ಷ ಮಾಡಿದೆ. ಆನಂದ್ ಸಿಂಗ್ ಅವರನ್ನು ಬಿಜೆಪಿ ಕೂಡಿಹಾಕಿದೆ. ನಾಳೆ ಅವರು ಕಾಂಗ್ರೆಸ್ ಪರವಾಗಿ ಮತ ಹಾಕುತ್ತಾರೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News