ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ
ಬೆಂಗಳೂರು, ಮೇ 18: ಸುಪ್ರೀಂಕೋರ್ಟ್ ನಾಳೆಯೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶುಕ್ರವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಭವನದಲ್ಲಿ ನಡೆದ ಏಕ ಸದಸ್ಯ ಸಚಿವ ಸಂಪುಟದ ತುರ್ತು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಅಧಿವೇಶನ ಕರೆಯುವ ಬಗ್ಗೆ ಮಾತ್ರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಂಪುಟದ ತೀರ್ಮಾನವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು. ಹಂಗಾಮಿ ಸ್ಪೀಕರ್ ಆಯ್ಕೆ ಬಗ್ಗೆಯೂ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡುತ್ತೇವೆ. ಸದನದಲ್ಲಿ ಬಹುಮತವನ್ನು ಸಾಬೀತುಪಡಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಅಧಿವೇಶನಕ್ಕೆ ಸಿದ್ಧತೆ: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ, ತಮ್ಮ ಸಿಬ್ಬಂದಿಗಳೊಂದಿಗೆ ವಿಧಾನಸಭೆ ಅಧಿವೇಶನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.