ರಾಜ್ಯಪಾಲರ ಕ್ರಮ ವಿವೇಚನಾ ರಹಿತವಾದುದು: ಸಿಪಿಎಂ ಟೀಕೆ

Update: 2018-05-18 12:27 GMT

ಬೆಂಗಳೂರು, ಮೇ 18: ಸರಕಾರ ರಚನೆ ಮಾಡಲು ಅಗತ್ಯವಿರುವಷ್ಟು ಬಹುಮತವಿಲ್ಲದಿದ್ದರೂ ಬಿಜೆಪಿ ಪಕ್ಷವನ್ನು ಆಹ್ವಾನಿಸಿ ಸರಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ವಿವೇಚನಾ ರಹಿತವಾದುದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಟೀಕಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಸಂವಿಧಾನಾತ್ಮಕವಾಗಿ ನೇಮಕವಾಗಿರುವ ರಾಜ್ಯಪಾಲರು ತಮ್ಮ ಸ್ಥಾನದ ಘನತೆ ಮರೆತು ಬಿಜೆಪಿ ಹಾಗೂ ಸಂಘಪರಿವಾರದ ಏಜೆಂಟರಾಗಿ ಕಾರ್ಯನಿರ್ವಹಿಸಿದ್ದಾರೆ. ಆ ಮೂಲಕ ಸಂವಿಧಾನದ ಮೂಲ ಆಶಯಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಒಂದು ರಾಜಕೀಯ ಪಕ್ಷಕ್ಕೆ ಬಹುಮತ ನೀಡದಿದ್ದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ನಿವಾರಿಸಲು ಹಾಗೂ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಘೋಷಣೆ ಮಾಡಿದ್ದು, ಬಹುಮತ ಪಡೆದು, ಸರಕಾರ ರಚನೆ ಮಾಡಲು ಅವಕಾಶ ಕೇಳಲಾಗಿತ್ತು. ಆದರೆ, ಅಗತ್ಯ ಸಂಖ್ಯಾಬಲ ಮತ್ತು ಜನಮತ ಬಿಜೆಪಿ ಪರವಾಗಿಲ್ಲದಿದ್ದರೂ ನಮಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿ ಎಂದು ಕೇಳಿದ್ದ ಬಿಜೆಪಿಗೆ ಅವಕಾಶ ನೀಡಿರುವುದು ಖಂಡನಾರ್ಹ ಎಂದು ಹೇಳಿದರು.

ಕೇಂದ್ರ ಸರಕಾರ ಹಾಗೂ ಬಿಜೆಪಿ ನಾಯಕರು ರಾಜಭವನ ಕಚೇರಿಯನ್ನು ಬಿಜೆಪಿ ಕಚೇರಿಯಂತೆ ಪರಿವರ್ತನೆ ಮಾಡಿಕೊಂಡಿದ್ದು, ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಜಾಸತ್ತೆಯನ್ನು ಗಾಳಿಗೆ ತೂರಿ ಕುದುರೆ ವ್ಯಾಪಾರವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯಪಾಲರು ಅಧಿಕೃತವಾಗಿ ತಮ್ಮ ನಿರ್ಧಾರ ಪ್ರಕಟ ಮಾಡುವ ಮೊದಲೇ ದಿಲ್ಲಿಯಿಂದ ಬಂದಿದ್ದ ಬಿಜೆಪಿ ಮುಖಂಡ ಹಾಗೂ ಬಿಜೆಪಿ ನಾಯಕರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಬಹಿರಂಗವಾಗಿ ರಾಜ್ಯಪಾಲರ ಮೇಲೆ ಒತ್ತಡ ಹೇರುವ ಗೂಂಡಾ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ಅವರು ದೂರಿದರು.

ಸಂವಿಧಾನ ಬಾಹಿರವಾಗಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಯಾವುದೇ ಸಂಖ್ಯಾಬಲವಿಲ್ಲದಿದ್ದರೂ ಸದನದಲ್ಲಿ ಬಹುಮತ ಸಾಬೀತು ಮಾಡಲಾಗುತ್ತದೆ ಎನ್ನುತ್ತಿರುವುದು ಹಾಸ್ಯಾಸ್ಪದ. ಅಲ್ಲದೆ, ಇಡೀ ದೇಶದ ಎದುರು ರಾಜ್ಯ ಮಾನ-ಮರ್ಯಾದೆಯನ್ನು ಹರಾಜು ಹಾಕಲು ಮುಂದಾಗಿದ್ದಾರೆ. ಗಣಿ-ದಣಿಗಳಿಗೆ ಅಕ್ರಮಕ್ಕೆ, ಭೂ ಮಾಫಿಯಾಗಳಿಗೆ ನೇರವಾಗಿ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News