ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಕರೆದೊಯ್ದ 'ಶರ್ಮಾ ಟ್ರಾವೆಲ್ಸ್'ನ ಬಸ್ ಗಳು ಯಾರದ್ದು ಗೊತ್ತಾ?

Update: 2018-05-18 12:32 GMT

ಹೊಸದಿಲ್ಲಿ, ಮೇ 18: ತಮ್ಮ ಶಾಸಕರಿಗೆ ಬಿಜೆಪಿ ಬಲೆ ಹಾಕದಂತೆ ತಪ್ಪಿಸುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲರನ್ನೂ ಕರ್ನಾಟಕದಿಂದ ಹೊರಗೆ ಕರೆದೊಯ್ಯಲು ಗುರುವಾರ ಬಳಸಿದ್ದ ಬಸ್ಸುಗಳು ಶರ್ಮ ಟ್ರಾವೆಲ್ ಸರ್ವಿಸಸ್ ಗೆ ಸೇರಿದ್ದವು.  ಈ ಟ್ರಾವೆಲ್ಸ್ ಸಂಸ್ಥೆಯ ಮಾಲಕರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವವರಾಗಿರುವುದರಿಂದಲೇ ಈ ವ್ಯವಸ್ಥೆ ಮಾಡಲಾಗಿತ್ತೆಂದು ಈಗ ತಿಳಿದು ಬಂದಿದೆ.

ಶರ್ಮ ಟ್ರಾವೆಲ್ ಸರ್ವಿಸಸ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತರೆಂದೇ ಪರಿಗಣಿಸಲ್ಪಟ್ಟಿದ್ದ ದಿವಂಗತ ಡಿ.ಪಿ. ಶರ್ಮಾ ಅವರಿಗೆ ಸೇರಿದ್ದಾಗಿತ್ತು. ರಾಜಸ್ಥಾನದವರಾಗಿದ್ದ ಶರ್ಮಾ ಪಕ್ಷದ ಚಟುವಟಿಕೆಗಳಲ್ಲಿ 80ರ ದಶಕದಲ್ಲಿ ದಕ್ಷಿಣ ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದರು. 1998ರಲ್ಲಿ ಅವರು ದಕ್ಷಿಣ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ  ಈಗಿನ ಕೇಂದ್ರ ಸಚಿವ ಅನಂತ್ ಕುಮಾರ್ ಅವರೆದುರು 1.5ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದರು.

ಅವರು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಪಿ ವಿ ನರಸಿಂಹ ರಾವ್ ಹಾಗೂ ರಾಜೀವ್ ಗಾಂಧಿಯ ಸಮೀಪವರ್ತಿಯಾಗಿದ್ದರು. 2001ರಲ್ಲಿ ಅವರು ಮೃತಪಟ್ಟ ನಂತರ ಅವರ ಪುತ್ರ ಸುನಿಲ್ ಕುಮಾರ್ ಶರ್ಮ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ದೇಶದಲ್ಲಿ ಲೆಕ್ಸಿಯಾ ಮತ್ತು ವೋಲ್ವೋ ಬಸ್ಸುಗಳನ್ನು ಮೊದಲು ಆರಂಭಿಸಿದ ಖ್ಯಾತಿ ಅವರ ಸಂಸ್ಥೆಗಿದೆ.

ಬೆಂಗಳೂರಿನಿಂದ ಮುಂಬೈ, ಪುಣೆ, ಅಹ್ಮದಾಬಾದ್, ಹೈದರಾಬಾದ್, ಚೆನ್ನೈ, ಗೋವಾ, ಪುದುಚ್ಚೇರಿ, ಎರ್ಣಾಕುಳಂ ಮುಂತಾದೆಡೆ ಈ ಸಂಸ್ಥೆ ಸಾರಿಗೆ ವ್ಯವಸ್ಥೆ ಒದಗಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News