ರಾಜ್ಯದಲ್ಲಿ ಜೂ.10 ರಂದು ಹಾಲು, ಹಣ್ಣು, ತರಕಾರಿ ಬಂದ್: ಕುರುಬೂರು ಶಾಂತಕುಮಾರ್

Update: 2018-05-18 12:32 GMT

ಬೆಂಗಳೂರು, ಮೇ 18: ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳನ್ನು ಪೂರೈಸಿದರೂ ಕರ್ನಾಟಕ ರಾಜ್ಯ ಸೇರಿ ಯಾವುದೇ ರಾಜ್ಯಗಳ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಹೀಗಾಗಿ, ಈ ಅನ್ಯಾಯವನ್ನು ಖಂಡಿಸಿ ರಾಷ್ಟ್ರೀಯ ಕಿಸಾನ್ ಮಹಾಸಂಘವು ದೇಶಾದ್ಯಂತ ಜೂ. 1 ರಿಂದ 10ರವರೆಗೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಸರಬರಾಜಾಗುವ ತರಕಾರಿ, ಹಾಲು, ಹಣ್ಣು ಹಾಗೂ ಇತರೆ ದಿನಬಳಕೆ ವಸ್ತುಗಳನ್ನು ಸರಬರಾಜು ಆಗದಂತೆ ತಡೆಗಟ್ಟಿ ಪ್ರತಿಭಟಿಸಲಾಗುವುದು. ಆದರೆ, ಕರ್ನಾಟಕದಲ್ಲಿ ಮಾತ್ರ ಜೂ. 10 ರಂದು ದಿನಬಳಕೆ ವಸ್ತುಗಳು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಹೋಗದಂತೆ ತಡೆಗಟ್ಟಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಶುಕ್ರವಾರ ಗಾಂಧಿ ಭವನದಲ್ಲಿ ರೈತರೊಂದಿಗಿನ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡುತ್ತಿಲ್ಲ. ರೈತರ ಸಮಸ್ಯೆಗಳನ್ನು ಆಲಿಸಲು ನರೇಂದ್ರ ಮೋದಿ ಅವರು ಒಂದು ಸಭೆಯನ್ನು ಕರೆಯುತ್ತಿಲ್ಲ. ಹೀಗಾಗಿ, ಈ ಅನ್ಯಾಯವನ್ನು ಖಂಡಿಸಿ ರಾಜ್ಯದ ರೈತರಿಗೆ ಜೂನ್ 10ರಂದು ಯಾವುದೇ ದಿನಬಳಕೆ ವಸ್ತುಗಳನ್ನು ನಗರ ಪ್ರದೇಶಕ್ಕೆ ಸರಬರಾಜು ಮಾಡದಂತೆ ಕರೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರಕಾರ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ 1200 ಕೋಟಿ ರೂ.ಬಾಕಿ ಹಣವನ್ನು ಕಬ್ಬು ಬೆಳೆಗಾರರಿಗೆ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು. ರೈತರ ಪರ ಹೋರಾಟ ಮಾಡಿದವರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ರಾಜ್ಯ ಸರಕಾರ ವಾಪಸ್ ತೆಗೆುಕೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಸರಕಾರ ಹಗಲು ಹೊತ್ತಿನಲ್ಲಿ 10 ಗಂಟೆಗಳ ಕಾಲ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು. ಅಲ್ಲದೆ, ಮಹದಾಯಿ ನದಿ ನೀರಿನ ವಿವಾದ ಬಗೆ ಹರಿಸಬೇಕು. ಕಾವೇರಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರ ಜಾರಿಗೆ ತಂದಿರುವ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯನ್ನು ಎಲ್ಲ ಪ್ರದೇಶಕ್ಕೆ ಅನ್ವಯವಾಗುವಂತೆ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕಿಸಾನ್ ಮಹಾಸಂಘದ ಸಂಚಾಲಕ ಕೆ.ವಿ.ಬಿಜು, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವೀರನಗೌಡ ಪಾಟೀಲ್, ದೇವರಾಜ್, ಎಸ್.ಬಿ.ಸಿದ್ನಾಳ್, ರಾಜಶೇಖರ್ ಬೆಟಗೇರಿ, ಆಂಜನಪ್ಪ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News